ಸಾರಾಂಶ
ಮದ್ಯ, ಮಾದಕ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣಕನ್ನಡಪ್ರಭ ವಾರ್ತೆ ಬಳ್ಳಾರಿ
ಮದ್ಯ ಮತ್ತು ಮಾದಕ ವಸ್ತುಗಳಿಗೆ ಅವಲಂಬಿತರಾದವರು ಮಾನಸಿಕ, ಶಾರೀರಿಕವಾಗಿ ಕುಗ್ಗುತ್ತಾರೆ. ಇದರಿಂದ ತನ್ನ ಜೀವನ ಮತ್ತು ಕುಟುಂಬವು ಕಷ್ಟದಲ್ಲಿ ಸಿಲುಕುತ್ತದೆ. ಹಾಗಾಗಿ ಮನುಷ್ಯನು ಶಾರೀರಿಕವಾಗಿ, ದೈಹಿಕವಾಗಿ ಸದೃಢನಾಗಿರಬೇಕೆಂದರೆ ಮದ್ಯ ಮತ್ತು ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ವೀರೇಂದ್ರ ಕುಮಾರ್ ತಿಳಿಸಿದರು.ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಹಾಗೂ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್ಎಸ್ ಘಟಕದಿಂದ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಮದ್ಯ ಮತ್ತು ಮಾದಕ ದುಷ್ಪರಿಣಾಮ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು, 16ರಿಂದ 22 ರ ವಯಸ್ಸಿನ ಯುವ ಸಮುದಾಯದವರು ಹೆಚ್ಚಾಗಿ ಮಾದಕ ವಸ್ತುಗಳಿಗೆ ವ್ಯಸನಿಗಳಾಗುವುದು ಕಂಡುಬರುತ್ತಿದ್ದು, ಪ್ರಸ್ತುತದಲ್ಲಿ ಶೇ.55 ರಷ್ಟು ಈ ವಯಸ್ಸಿನ ಅಂತರದ ಯುವ ಸಮುದಾಯವು ಒಳಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.ಯುವಕರು ಮೊಬೈಲ್ ಗೀಳಿಗೆ ದಾಸರಾಗಬಾರದು. ಚಲನಚಿತ್ರಗಳನ್ನು ಮನರಂಜನೆ ದೃಷ್ಟಿಯಿಂದ ನೋಡಬೇಕು. ಒಳ್ಳೆಯ ಸಂದೇಶ ಮಾತ್ರ ಆಯ್ಕೆ ಮಾಡಬೇಕು. ಕೆಟ್ಟ ಅಭ್ಯಾಸಗಳನ್ನು ಅನುಕರಣೆ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಹ್ಲಾದ ಚೌದ್ರಿ, ಯುವಕ-ಯುವತಿಯರು ಮದ್ಯ ಮತ್ತು ಮಾದಕ ವಸ್ತುಗಳಿಗೆ ಬಲಿಯಾಗದೇ ಉತ್ತಮ ಆದರ್ಶ ಜೀವನ ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಎನ್ಎಸ್‌ಎಸ್ ಅಧಿಕಾರಿ ಪ್ರೊ. ಬಿ. ರಾಮಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮಾಧಿಕಾರಿ ಪ್ರೊ. ಪ್ರವೀಣ್ ಕುಮಾರ್ ಹಾಗೂ ಡಾ. ಚನ್ನಬಸವಯ್ಯ ಎಚ್.ಎಂ. ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ನಾಜಿಯಾ ಖಾಜಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ವಾರ್ತಾ ಇಲಾಖೆಯ ವಿ.ಸಿ. ಗುರುರಾಜ ಸೇರಿದಂತೆ ಕಾಲೇಜಿನ ಭೋದಕ-ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.