ಈವರೆಗೆ ಪಂಚ ಗ್ಯಾರಂಟಿ ಯೋಜನೆಗೆ 1,76 ಲಕ್ಷ ಕೋಟಿಯನ್ನು ವಿನಿಯೋಗಿಸಲಾಗಿದೆ. ಗ್ಯಾರಂಟಿ ಯೋಜನೆಯ ಪರಿಣಾಮ ದೇಶದಲ್ಲಿಯೇ ಜಿಎಸ್‌ಟಿ ಸಂಗ್ರಹಕ್ಕೆ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಪ್ರತಿ ವ್ಯಕ್ತಿ ತಲಾ ಆದಾಯ ಮೊದಲನೇ ಸ್ಥಾನದಲ್ಲಿದೆ.
ಮುಂಡರಗಿ: ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆ ಬಡವರಿಗೆ ಅನುಕೂಲವಾಗಿದ್ದು, ಇದೀಗ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಯೋಜನೆಗಳ ಪುನರ್ ಪರಿಶೀಲನೆ ನಡೆಸಿದ್ದು, ನಿಜವಾದ ಅರ್ಹರಿಗೆ ಯೋಜನೆ ತಲುಪುವಂಥ ವ್ಯವಸ್ಥೆ ಕೈಗೊಂಡಿದ್ದಾರೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ತಿಳಿಸಿದರು.
ಬುಧವಾರ ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈವರೆಗೆ ಪಂಚ ಗ್ಯಾರಂಟಿ ಯೋಜನೆಗೆ 1,76 ಲಕ್ಷ ಕೋಟಿಯನ್ನು ವಿನಿಯೋಗಿಸಲಾಗಿದೆ. ಗ್ಯಾರಂಟಿ ಯೋಜನೆಯ ಪರಿಣಾಮ ದೇಶದಲ್ಲಿಯೇ ಜಿಎಸ್‌ಟಿ ಸಂಗ್ರಹಕ್ಕೆ ಕರ್ನಾಟಕ 2ನೇ ಸ್ಥಾನದಲ್ಲಿದ್ದು, ಪ್ರತಿ ವ್ಯಕ್ತಿ ತಲಾ ಆದಾಯ ಮೊದಲನೇ ಸ್ಥಾನದಲ್ಲಿದೆ. ಹೆಸ್ಕಾಂ ಇಲಾಖೆ ಕೂಡಾ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ಮಾಡುತ್ತಿದ್ದು, ಆಧಾರ ಕಾರ್ಡ್, ಬಾಡಿಗೆ ಒಪ್ಪಂದ ಪತ್ರ, ಪಾನ್ ಕಾರ್ಡ್ ಮತದಾರರ ಗುರುತಿನ ಚೀಟಿ ಹೀಗೆ ಅಗತ್ಯ ದಾಖಲೆಗಳನ್ನು ನೋಡುತ್ತಿದ್ದು, ಅರ್ಹರಿಗೆ ಯೋಜನೆ ತಲುಪಿಸುವ ಉದ್ದೇಶ ಇದೆ ಎಂದರು.ಸಿಡಿಪಿಒ ಬಸಮ್ಮ ಹುಳ್ಳಿ ಮಾಹಿತಿ ನೀಡಿ, ತಾಲೂಕಿನಲ್ಲಿ ಈವರೆಗೆ ಸರ್ವೆ ಮಾಡಿದ ಪ್ರಕಾರ ಗೃಹಲಕ್ಷ್ಮೀ 708 ಫಲಾನುಭವಿಗಳು ಮೃತಪಟ್ಟಿದ್ದು, ಅವರಲ್ಲಿ ಈವರೆಗೆ 420 ವ್ಯಕ್ತಿಗಳ ಮಾಹಿತಿ ಲಭ್ಯವಿದ್ದು, ಉಳಿದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.ಆಹಾರ ನಿರೀಕ್ಷಕ ಎನ್.ಆರ್. ಚಿನ್ನಪ್ಪಗೌಡರ ಮಾಹಿತಿ ಒದಗಿಸುವ ಸಂದರ್ಭದಲ್ಲಿ ಅಧ್ಯಕ್ಷ ಡಿ.ಡಿ. ಮೋರನಾಳ ಸೇರಿದಂತೆ ಸಮಿತಿ ಸದಸ್ಯರು, ಪ್ರತಿ ಗ್ರಾಮದ ಮನೆ ಮನೆಗೆ ಹೋಗಿ ಕೆಲವರು ಅನ್ನಭಾಗ್ಯ ಅಕ್ಕಿ ಸಂಗ್ರಹಿಸಲು ಮುಂದಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಮತ್ತು ಕ್ರಮ ಕೈಗೊಳ್ಳಬೇಕು ಎಂದರು. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಅಕ್ರಮ ಅಕ್ಕಿ ಮಾರಾಟ ಮಾಡಹೊರಟವರ ಮೇಲೆ ಎಷ್ಟು ಪ್ರಕರಣ ದಾಖಲಿಸಿಕೊಂಡಿದ್ದೀರಿ ಎಂಬ ಮಾಹಿತಿ ಒದಗಿಸಲು ತಿಳಿಸಿದರು.ತಾಪಂ ಇಒ ವಿಜಯಕುಮಾರ ಬೆಣ್ಣೆ ಈವರೆಗೆ ರೇಷನ್ ಒದಗಿಸಿದ ವಿವರ ಹಾಗೂ ಮನೆ ಮನೆಗೆ ಹೋಗಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸುವವರ ಮೇಲೆ ಕ್ರಮ ಕೈಗೊಂಡ ಬಗ್ಗೆ ತಿಳಿಸಬೇಕು ಎಂದು ಆಹಾರ ನಿರೀಕ್ಷಕರಿಗೆ ಆದೇಶಿಸಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ, ಜಿಲ್ಲಾ ಸದಸ್ಯ ಪುಲಕೇಶಿಗೌಡ ಪಾಟೀಲ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಾಮಣ್ಣ ಮೇಗಲಮನಿ, ವಿಶ್ವನಾಥ ಪಾಟೀಲ, ಭುವನೇಶ್ವರಿ ಕಲ್ಲುಕುಟಿಗರ, ನಾಗರಾಜ ಹಳ್ಳಿಕೇರಿ, ಸುರೇಶ ಮಾಳಗಿಮನಿ, ಕಾಶಪ್ಪ ಹೊನ್ನೂರ, ಗಣೇಶ ರಾಠೋಡ, ಉಮೇಶ ಕಲಾಲ, ಜಲಾಲಸಾಬ ವಡ್ಡಟ್ಟಿ, ತಾಪಂ ಸಿಬ್ಬಂದಿ ಎಚ್.ಎಂ. ಕಾತರಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂತನವಾಗಿ ತಾಪಂ ಇಒ ಆಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಬೆಣ್ಣೆ, ಸಿಡಿಪಿಒ ಬಸಮ್ಮ, ಆಹಾರ ನಿರೀಕ್ಷಕ ಎನ್.ಆರ್. ಚಿನ್ನಪ್ಪಗೌಡರ ಅವರನ್ನು ಗ್ಯಾರಂಟಿ ಸಮಿತಿಯಿಂದ ಸನ್ಮಾನಿಸಲಾಯಿತು.