ಗಂಗಿಮಡಿ ಪ್ರದೇಶದಲ್ಲಿ ಒಟ್ಟು 96 ಕುಟುಂಬಗಳು ತಗಡಿನ ಶೆಡ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಇದರಲ್ಲಿ 9 ಶೆಡ್‌ಗಳು ಸಂಪೂರ್ಣ ಕುಸಿದಿವೆ. ಈಗಾಗಲೇ ಜಿಲ್ಲಾಡಳಿತದಿಂದ 96 ಕುಟುಂಬಗಳಲ್ಲಿ 88 ಕುಟುಂಬಗಳಿಗೆ ತಲಾ ₹5 ಸಾವಿರ ಸಹಾಯಧನ ವಿತರಿಸಲಾಗಿದ್ದು, ಉಳಿದ ಕುಟುಂಬಗಳಿಗೂ ಶೀಘ್ರವೇ ನೆರವು ನೀಡಲಾಗುವುದು.
ಗದಗ: ನಗರದ ಗಂಗಿಮಡಿ ಪ್ರದೇಶದಲ್ಲಿ ಅಧಿಕ ಮಳೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.ಅಧಿಕ ಮಳೆಯಿಂದ ತೊಂದರೆಗೀಡಾದ ಗಂಗಿಮಡಿ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ನಿಮ್ಮ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕನ ಮಾಡಿದ್ದೇನೆ. ಸಂಕಷ್ಟದಲ್ಲಿರುವ ಜನರ ನೆರವಿಗೆ ಸರ್ಕಾರ ಸದಾ ಬದ್ಧವಾಗಿದೆ. ಯಾರೂ ಆತಂಕಪಡುವ ಅಗತ್ಯ ಇಲ್ಲ ಎಂದು ಭರವಸೆ ನೀಡಿದರು.ಗಂಗಿಮಡಿ ಪ್ರದೇಶದಲ್ಲಿ ಒಟ್ಟು 96 ಕುಟುಂಬಗಳು ತಗಡಿನ ಶೆಡ್‌ಗಳಲ್ಲಿ ಜೀವನ ಸಾಗಿಸುತ್ತಿದ್ದು, ಇದರಲ್ಲಿ 9 ಶೆಡ್‌ಗಳು ಸಂಪೂರ್ಣ ಕುಸಿದಿವೆ. ಈಗಾಗಲೇ ಜಿಲ್ಲಾಡಳಿತದಿಂದ 96 ಕುಟುಂಬಗಳಲ್ಲಿ 88 ಕುಟುಂಬಗಳಿಗೆ ತಲಾ ₹5 ಸಾವಿರ ಸಹಾಯಧನ ವಿತರಿಸಲಾಗಿದ್ದು, ಉಳಿದ ಕುಟುಂಬಗಳಿಗೂ ಶೀಘ್ರವೇ ನೆರವು ನೀಡಲಾಗುವುದು ಎಂದರು.
ಕೆಲವರು ಮನೆಗಳಿದ್ದರೂ ಇಲ್ಲಿ ಬಂದು ಶೆಡ್ ಹಾಕಿ ವಾಸಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಗಂಗಿಮಡಿಯಲ್ಲಿ ಮೊದಲ ಹಂತದಲ್ಲಿ 1000 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಿಜವಾದ ಅರ್ಹರಿಗೆ ಆದ್ಯತೆ ನೀಡಲಾಗುವುದು. ಸಂತ್ರಸ್ತರಿಗೆ ಮನೆ ನೀಡಲು ಕ್ರಮ ವಹಿಸಲಾಗುವುದು. ಸಂಪೂರ್ಣ ಹಾನಿಗೊಳಗಾದ 9 ಮನೆಗಳ ಕುಟುಂಬಗಳು ಈಗಿನ ₹5 ಸಾವಿರ ಸಹಾಯಧನ ಸಾಕಾಗುವುದಿಲ್ಲ ಎಂದು ಮನವಿ ಮಾಡಿದ್ದು, ಕನಿಷ್ಠ ₹20 ಸಾವಿರ ನೆರವು ನೀಡುವಂತೆ ಬೇಡಿಕೆ ಇಟ್ಟಿವೆ.ಈ ಬಗ್ಗೆ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯ ಸಂತ್ರಸ್ತರು ಶಾಲಾ ಕೊಠಡಿಗಳಲ್ಲಿ ಆಶ್ರಯ ಪಡೆದಿದ್ದು, ಶಾಲೆಗಳು ಆರಂಭವಾಗುವ ಹಿನ್ನೆಲೆ ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಿರಲಿ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಈ ವೇಳೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿ, ಗಂಗಿಮಡಿ ಪ್ರದೇಶದ 96 ಕುಟುಂಬಗಳಲ್ಲಿ ಸುಮಾರು ಶೇ. 60ರಷ್ಟು ಕುಟುಂಬಗಳಿಗೆ ಮನೆ ಮಂಜೂರಾಗಿರುವುದಾಗಿ ತಿಳಿಸಿದರು. ಸಂತ್ರಸ್ತರಿಗೆ ಆಹಾರ, ಆರೋಗ್ಯ ಸೇವೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ ಎಂದರು.ಸಾರ್ವಜನಿಕರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡು, ಮಂಜೂರಾದ ಮನೆಗಳ ಮರು ಸರ್ವೇ ನಡೆಸಬೇಕು. ಕೆಲವರು ಮಂಜೂರಾದ ಮನೆಗಳನ್ನು ಬಾಡಿಗೆಗೆ ನೀಡಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ಮನೆ ಇಲ್ಲದವರು ತಾತ್ಕಾಲಿಕ ಶೆಡ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಸರ್ಕಾರ ನೀಡಿರುವ ನೆರವು ಸಾಕಾಗುತ್ತಿಲ್ಲ. ಹೆಚ್ಚುವರಿ ಸಹಾಯಧನ ನೀಡಬೇಕು ಹಾಗೂ ಶಾಶ್ವತ ಸೂರು ಕಲ್ಪಿಸಬೇಕು ಎಂದು ಮನವಿ ಮಾಡಿದರು.ಗಂಗಿಮಡಿಗೆ ಶಾಶ್ವತ ನೀರಿನ ಸಂಪರ್ಕ ಕಲ್ಪಿಸಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡಬೇಕು. ಸೋಲಾರ್ ಲೈಟ್‌ಗಳನ್ನು ಅಳವಡಿಸಬೇಕು, ಮೂಲ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಮನೆ ಮಂಜೂರಾಗುವವರೆಗೆ ಇಲ್ಲಿಯೇ ವಾಸಿಸಲು ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಕೆಡಿಪಿ ಸಮಿತಿ ಸದಸ್ಯ ಎಸ್.ಎನ್. ಬಳ್ಳಾರಿ, ನೀಲವ್ವ ಬೋಳನವರ, ಸಿದ್ದು ಪಾಟೀಲ, ಎಸಿ ಗಂಗಪ್ಪ ಎಂ., ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಡಾ. ಎಸ್.ಎಸ್. ನೀಲಗುಂದ, ಆರ್.ಎಸ್. ಬುರಡಿ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.25ಜಿಡಿಜಿ9