ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಸಿದ್ದಗಂಗಾ ಮಠದ ವತಿಯಿಂದ ನಡೆಯುತ್ತಿರುವ ಶಾಲಾ, ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಬೋಧಕ ಸಿಬ್ಬಂದಿಗಳ ಸಹಕಾರದೊಂದಿಗೆ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಿದ್ದಗಂಗಾ ಮಠದ ಕಾರ್ಯಕಾರಿ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.ನಗರದ ಶ್ರೀ ಸಿದ್ದಗಂಗಾ ಮಠದ ಉದ್ಯಾನ ಶಿವಯೋಗಿಗಳ ಸಮುದಾಯಭವನದಲ್ಲಿ ಶ್ರೀ ಸಿದ್ದಗಂಗಾ ಇಂಗ್ಲಿಷ್ ಮೀಡಿಯಂ ಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿದ್ದಗಂಗಾ ಮಠದ ವತಿಯಿಂದ ನಡೆಯುತ್ತಿರುವ ಎಲ್ಲಾ ಶಾಲಾ, ಕಾಲೇಜುಗಳಲ್ಲಿಯೂ ಫಲಿತಾಂಶ ಚೆನ್ನಾಗಿಯೇ ಇದೆ. ಅದನ್ನು ಮತ್ತಷ್ಟು ಸುಧಾರಿಸಿ, ಮಕ್ಕಳ ಸಮಗ್ರ ಬೆಳವಣಿಗೆಗೆ ಪೂರಕವಾದ ಶೈಕ್ಷಣಿಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ತರಲಿದ್ದೇವೆ ಎಂದರು.ತುಮಕೂರು ಜಿಲ್ಲೆಯಲ್ಲಿ ಖಾಸಗಿ ಶಾಲೆಗಳಲ್ಲಿ 8-9ನೇ ತರಗತಿಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ, ಕಡಿಮೆ ಅಂಕಗಳಿಸುವ ವಿದ್ಯಾರ್ಥಿಗಳಿಗೆ 10 ನೇ ತರಗತಿಗೆ ಸೇರಿಸಿಕೊಳ್ಳದೆ ಟಿ.ಸಿ.ಕೊಟ್ಟು ಕಳುಹಿಸುವ ಕೆಲಸ ನಡೆಯುತ್ತಿದೆ. ಇದರಿಂದ ಬಡಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಕೆಲಸ ಮಾಡುತ್ತಿರುವ ಮಠದಂತಹ ಶಾಲೆಗಳ ಫಲಿತಾಂಶ ಕುಸಿಯಲು ಕಾರಣವಾಗಿದೆ. 1ನೇ ತರಗತಿಯಿಂದ ಕಲಿಸಿ, ಎಸ್.ಎಸ್.ಎಲ್.ಸಿಯಲ್ಲಿ ಬೇರೆ ಶಾಲೆಗೆ ಸೇರಿಸುವುದು ಸರಿಯಾದ ನಡವಳಿಕೆ ಅಲ್ಲ. ಇಂತಹ ಶಾಲೆಗಳಿಗೆ ಕಡಿವಾಣ ಹಾಕಬೇಕು ಎಂದು ಕಾರ್ಯಕ್ರಮದಲ್ಲಿದ್ದ ಬಿಇಓ ಹನುಮಂತಪ್ಪ ಅವರಿಗೆ ಜಯವಿಭವಸ್ವಾಮಿ ಮನವಿ ಮಾಡಿದರು.
ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರು ಮಾತ್ರ ಅಭಿನಂದನೆಗೆ ಆರ್ಹರಲ್ಲ. ಪಾಸಾಗಿರುವ ಎಲ್ಲಾ ಮಕ್ಕಳು ಗೌರವಕ್ಕೆ ಪಾತ್ರರು. ಶೇ.95ರಷ್ಟು ಅಂಕ ಪಡೆದಿದ್ದೇನೆ ಎಂದು ವಿರಮಿಸುವ ಕಾಲ ಇದಲ್ಲ. ನಿಜವಾದ ಪರಿಶ್ರಮ ಆರಂಭವಾಗುವುದೇ ಇಲ್ಲಿಂದ ಎಂದ ಅವರು, ನಮ್ಮ ಶಾಲೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಮಕ್ಕಳು ಪಿಯುಸಿಗೆ ಬೇರೆ ಕಾಲೇಜುಗಳಿಗೆ ಸೇರದಂತೆ, ನಮ್ಮ ಶಾಲೆಯ ಆವರಣದಲ್ಲಿಯೇ ಪಿಯು ಕಾಲೇಜು ತೆರೆದು ಒಳ್ಳೆಯ ಶಿಕ್ಷಣ ನೀಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.ವಾರ್ತಾ ಮತ್ತು ಸಾರ್ವಜನಿಕ ಸಂಪಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಮಾತನಾಡಿ, ಶ್ರದ್ಧೆ ಮತ್ತು ಪರಿಶ್ರಮ ಸಾಧನೆಯೆಂಬ ಶಿಖರಕ್ಕೆ ಮೆಟ್ಟಿಲುಗಳು, ಸಕಾರಾತ್ಮಕ ಮನೋಭಾವನೆ ಬೆಳೆಸಿಕೊಂಡು ಮುನ್ನೆಡೆದರೆ ಎಲ್ಲವೂ ಒಳ್ಳೆಯದೇ ಆಗುತ್ತದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿರುವಂತೆ ಸಮಾಜದಿಂದ ಎಲ್ಲವನ್ನು ಪಡೆದಿರುವ ನೀವು, ಸಮಾಜಕ್ಕೆ ಕೊಡುವಂತಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿದರು.ಕಾರ್ಯಕ್ರಮದಲ್ಲಿ 2024-25ನೇ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ 625ಕ್ಕೆ 621ಅಂಕ ಪಡೆದ ಯೋಗಾನಂದ್ ಬಿ.ಕೆ. ಸೇರಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ 49 ಮಕ್ಕಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಸೋಮಶೇಖರಯ್ಯ, ಶಿಕ್ಷಕರಾದ ಕೆ.ಆರ್.ವಿಜಯಲಕ್ಷ್ಮೀ ನವೀನಕುಮಾರ್ ಸೇರಿದಂತೆ ಶಿಕ್ಷಕರು, ಶಿಕ್ಷಕೇತರು ವೇದಿಕೆಯಲ್ಲಿದ್ದರು.