ನಶಾ ಮುಕ್ತ ನಗರವನ್ನಾಗಿಸಲು ಕ್ರಮ

| Published : Jul 25 2025, 01:13 AM IST

ಸಾರಾಂಶ

ಬೆಳಗಾವಿ ಪತ್ರಕರ್ತರ ಸಂಘದಿಂದ ನಗರದ ವಾರ್ತಾ ಭವನದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ನಗರ ಪೊಲೀಸ್‌ ಆಯುಕ್ತ ಭೂಷಣ ಗುಲಾಬ್‌ರಾವ್‌ ಬೊರಸೆ ಅವರು ನಗರದ ಸಂಚಾರ ಸಮಸ್ಯೆ ನಿವಾರಣೆ, ಸೈಬರ್‌ ಅಪರಾಧಗಳ ನಿಯಂತ್ರಣ, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಸೇರಿದಂತೆ ಇಲಾಖೆಯಲ್ಲಿರುವ ಸಮಸ್ಯೆಗಳ ಕುರಿತು ತಮ್ಮ ಕಾರ್ಯಯೋಜನೆ ಹಾಗೂ ಕ್ರಮಗಳ ಬಗ್ಗೆ ತೆರೆದಿಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಾದಕ ವಸ್ತುಗಳು ಮಹಾರಾಷ್ಟ್ರದ ಮುಂಬಯಿ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ನಗರಕ್ಕೆ ಬರುತ್ತಿದೆ. ಮಾದಕ ವಸ್ತುಗಳ ಕುರಿತು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ನಗರವನ್ನು ನಶಾ ಮುಕ್ತ ನಗರವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭೂಷಣ ಗುಲಾಬ್‌ರಾವ್‌ ಬೊರಸೆ ಹೇಳಿದರು.

ಡ್ರಗ್ಸ್‌ ಮಾಫಿಯಾ ಹಿಂದೆ ಯಾರಿದ್ದಾರೆ ಎಂಬುವುದರ ಕುರಿತು ತನಿಖೆ ನಡೆಯುತ್ತಿದೆ. ಡ್ರಗ್ಸ್‌ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ನಗರದಲ್ಲಿ ಗಾಂಜಾ ಸೇರಿದಂತೆ ಮತ್ತಿತರ ಮಾದಕ ವಸ್ತುಗಳ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತ ಬಂದಿದೆ. ಗಾಂಜಾ ಸೇರಿ ಮಾದಕ ವಸ್ತುಗಳನ್ನು ಮಾರಾಟ ಮಾಡುವರು ಹಾಗೂ ತೆಗೆದುಕೊಳ್ಳುವರ ನಡುವೆ ಪರಸ್ಪರ ಒಪ್ಪಂದವಿರುತ್ತದೆ. ಇತ್ತೀಚೆಗೆ ಗಾಂಜಾ ಮಾರಾಟಗಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗಿದೆ. ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.ಬ್ಲಾಕ್‌ ಸ್ಪಾಟ್‌ ಗುರುತಿಸಿ ಸವಾರರಿಗೆ ಜಾಗೃತಿ

ರಸ್ತೆ ಸುರಕ್ಷತಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಬ್ಲಾಕ್‌ ಸ್ಪಾಟ್‌ಗಳ ಬಗ್ಗೆ ವರದಿಯಾಗುತ್ತಿಲ್ಲ. ಒಂದೇ ಸ್ಥಳದಲ್ಲಿ ಪದೇ ಪದೆ ಅಪಘಾತಗಳಾಗುತ್ತಿದ್ದರೇ ಅದಕ್ಕೆ ಎಂಜಿನೀಯರಿಂಗ್‌ ಪಾಲ್ಟ್‌ ಕಾರಣವಾಗುತ್ತದೆ. ಇಂತಹ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್‌ಗಳನ್ನಾಗಿ ಗುರುತಿಸಲಾಗುತ್ತದೆ. ಈ ಕುರಿತು ವಾಹನ ಸವಾರರಿಗೆ ಜಾಗೃತಿ ಮೂಡಿಸಲಾಗುತ್ತಿದೆ.ನಗರದಲ್ಲಿ ಏಕಮುಖ ರಸ್ತೆಗಳಿದ್ದರೂ ವಾಹನ ದಟ್ಟಣೆಯಾಗುತ್ತಿದೆ. ಸಂಚಾರ ನಿಯಮಗಳನ್ನು ಯಾರೂ ಪಾಲನೆ ಮಾಡುತ್ತಿಲ್ಲ. ದ್ವಿಚಕ್ರವಾಹನದ ಸವಾರರು ಹೆಲ್ಮೆಟ್‌ ಹಾಕುತ್ತಿಲ್ಲ. ವಾಹನ ಚಲಾಯಿಸುವವರು ಸೀಟ್‌ ಬೆಲ್ಟ್‌ ಹಾಕುತ್ತಿಲ್ಲ. ಹೆಲ್ಮೆಟ್‌ ಧರಿಸುವುದು ಮತ್ತು ಸೀಟ್‌ ಬೆಲ್ಟ್‌ ಧರಿಸುವುದನ್ನು ಪ್ರತಿಯೊಬ್ಬರು ರೂಢಿಯನ್ನಾಗಿಸಿಕೊಳ್ಳಬೇಕು. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ಮನೆಗಳಿಗೆ ದಂಡ ಪಾವತಿಸುವಂತೆ ನೋಟಿಸ್‌ ಕಳುಹಿಸಲಾಗುತ್ತದೆ. ದಂಡ ಪಾವತಿಸುವವರಿಗೆ ಅನುಕೂಲವಾಗುವಂತೆ ನಗರದ ಬೆಳಗಾವಿ ಒನ್‌ ಕೇಂದ್ರದಲ್ಲಿ ದಂಡ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. 460 ಬ್ಯಾರಿಕೇಡ್‌ ಅಳವಡಿಕೆ

ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರದಲ್ಲಿ ಸುಮಾರು 460 ಬ್ಯಾರಿಕೇಡ್‌ಗಳನ್ನು ಪ್ರಮುಖ ರಸ್ತೆ ಮಾರ್ಗಗಳಲ್ಲಿ ಅಳವಡಿಸಲಾಗಿದೆ. ಈ ಎಲ್ಲ ಬ್ಯಾರಿಕೇಡ್‌ಗಲಿಗೆ ರಿಪ್ಲೆಕ್ಟರ್‌ನ್ನು ಹಾಕಲಾಗಿದೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗಿದೆ. ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಖಾಲಿ ಸ್ಥಳಗಳ ಬಳಕೆ

ಬೆಳಗಾವಿ ಕೇಂದ್ರ ಬಸ್‌ ನಿಲ್ದಾಣದ ಬಸ್‌ಗಳ ಸಂಚಾರ ವ್ಯವಸ್ಥೆ ಸುಧಾರಣೆ ಸಂಬಂಧ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ, ರಸ್ತೆಗಳ ಬದಿಯಲ್ಲಿ ಭಾರೀ ಗಾತ್ರದ ವಾಹನಗಳ ಪಾರ್ಕಿಂಗ್‌ದಿಂದಾಗಿ ಅನ್ಯ ವಾಹನಗಳ ಸಂಚಾರಕ್ಕೆ ಅಡೆತಡೆಯಾಗಿರುವ ಕುರಿತು ದೂರುಗಳು ಬಂದಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.ವಾಹನಗಳ ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಖಾಲಿ ಇರುವ ಸ್ಥಳಗಳನ್ನು ಗುರುತಿಸಲಾಗುವುದು. ಕೆಲವೆಡೆ ಶುಲ್ಕ ಪಾವತಿಸಿ, ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು. ಇದರ ಜೊತೆಗೆ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.ಪೊಲೀಸ್‌ ಸಿಬ್ಬಂದಿ ಕೊರತೆಯಿಂದ ಹೆಚ್ಚಿದ ಒತ್ತಡ

ಬೆಳಗಾವಿ ಪೊಲೀಸ್‌ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸ್‌ ಸಿಬ್ಬಂದಿ ಕೊರತೆ ಇದೆ. ಸದ್ಯ ಇದ್ದ ಸಿಬ್ಬಂದಿ ಮೇಲೆಯೇ ಹೆಚ್ಚಿನ ಒತ್ತಡ ಬೀಳುತ್ತಿದೆ. ಸಿಬ್ಬಂದಿ ಕೊರತೆ ನೀಗಿಸುವ ನಿಟ್ಟಿನಲ್ಲಿ 135 ಹೋಮ್‌ಗಾರ್ಡ್‌ಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸ್‌ ಸಿಬ್ಬಂದಿ ಸೇವೆಯನ್ನು ಶಿಫ್ಟ್‌ ವ್ಯವಸ್ಥೆಯ ಮೇಲೆ ನಿಯೋಜನೆ ಮಾಡಲಾಗುವುದು.ಗಣೇಶೋತ್ಸವಕ್ಕೆ ಸಕಲ ಸಿದ್ಧತೆ

ಅದ್ಧೂರಿ ಗಣೇಶೋತ್ಸವಕ್ಕೆ ಪೊಲೀಸ್‌ ಇಲಾಖೆ ಸಜ್ಜಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಯಾ ಠಾಣಾ ವ್ಯಾಪ್ತಿಗಳಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಜೊತಗೆ ಸಭೆಗಳು ನಡೆಯುತ್ತಿವೆ. ನಗರದ ಕಾನೂನು, ಸುವ್ಯವಸ್ಥೆ ಕಾಪಾಡಲು ಪೊಲೀಸರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು.ಮನೆ ಮನೆಗೆ ಪೊಲೀಸ್‌ ಭೇಟಿಗೆ 55 ಬೀಟ್‌

ಬೆಳಗಾವಿ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ಮನೆ ಮನೆಗೆ ಪೊಲೀಸ್‌ ಎಂಬ ನೂತನ ಯೋಜನೆ ಜಾರಿಗೊಳಿಸಲಾಗಿದೆ. ನಗರದಲ್ಲಿ 55 ಬೀಟ್‌ಗಳಿದ್ದು, ಪೊಲೀಸರು ಮನೆ ಮನೆಗೆ ಭೇಟಿ ನೀಡಿ ಕುಂದು-ಕೊರತೆ, ಸಮಸ್ಯೆ ಆಲಿಸುವರು. ಮಹಿಳೆಯರು ಮತ್ತು ಮಕ್ಕಳ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ.ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ, ಸುರಕ್ಷತೆ ಮತ್ತು ನೇರ ಸಂಪರ್ಕವನ್ನು ಹೆಚ್ಚಿಸುವ ಗುರಿ ಈ ಯೋಜನೆ ಹೊಂದಿರುತ್ತದೆ. ಈ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್‌ ಇಲಾಖೆಗೆ ಅಗತ್ಯವಿರುವ ಮಾಹಿತಿ ಸಂಗ್ರಹಿಸಲು ಸಹಾಯವಾಗಲಿದೆ.ಸಾರ್ವಜನಿಕರೊಂದಿಗೆ ಪೊಲೀಸರು ಉತ್ತಮ ಹಾಗೂ ಸ್ನೇಹಪರ ಸಂಬಂಧ ಬೆಸೆದುಕೊಳ್ಳಲು ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ. ಸ್ಥಳೀಯರಿಂದ ಸೂಕ್ಷ್ಮ ಮಾಹಿತಿಗಳನ್ನು ಪಡೆದುಕೊಳ್ಳಲು, ಅಪರಾಧಗಳನ್ನು ತಡೆಯಲು ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಸಾಧ್ಯವಾಗುತ್ತದೆ. ಪೊಲೀಸ್‌ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗಿ, ಇಲಾಖೆ, ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಪೊಲೀಸ್‌ ಸೇವೆ ಒದಗಿಸಬಹುದಾಗಿದೆ. ಬೆಳಗಾವಿ ನಗರದ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆ, ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಿಷ್ಕ್ರೀಯಗೊಂಡಿರುವ ಚನ್ನಮ್ಮ ಪಡೆಯನ್ನು ಮತ್ತೆ ಬಲತುಂಬಲಾಗುವುದು.

-ಭೂಷಣ ಗುಲಾಬ್‌ರಾವ್‌ ಬೊರಸೆ,
ನಗರ ಪೊಲೀಸ್‌ ಆಯುಕ್ತರು.