ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕುಶಾಲನಗರದ ಕೊಡವ ಸಮಾಜದ ಆವರಣದಲ್ಲಿ 1954ನೇ ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದ್ದು, 7ನೇ ದಿನ ಕಾವೇರಿ ಮಹಾ ಆರತಿ ಬಳಗ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ ಶಿಬಿರಾರ್ಥಿಗಳು ಕಾವೇರಿ ನದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಕಾವೇರಿಗೆ ಆರತಿ ಬೆಳಗಿದರು.ಪಟ್ಟಣದ ಕೊಡವ ಸಮಾಜದಿಂದ ಹೊರಟು ರಥಬೀದಿಯ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಶಿಬಿರಾರ್ಥಿಗಳು, ಮದ್ಯವ್ಯಸನದಿಂದ ಆಗುವ ದುಷ್ಪರಿಣಾಮದ ಕುರಿತು ಬಿತ್ತಿಫಲಕಗಳನ್ನು ಹಿಡಿಯುವುದರೊಂದಿಗೆ ಘೋಷಣೆ ಕೂಗಿದರು.ನಂತರ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿ ತಟದಲ್ಲಿ ಆರತಿ ಬೆಳಗಿದರು.ಈ ವೇಳೆ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕ ಚಂದ್ರಮೋಹನ್, ಯಾವುದೇ ಚಟ ಮನುಷ್ಯನನ್ನು ಅಂಧನನ್ನಾಗಿ ಮಾಡುತ್ತದೆ. ಮನುಷ್ಯ ಜೀವನವನ್ನು ಸಂಪೂರ್ಣವಾಗಿ ಆವರಿಸಿ ಜೀವನದ ಸರ್ವಸ್ವವನ್ನು ಕಬಳಿಸುವ ಶಕ್ತಿ ವ್ಯಸನಕ್ಕಿದೆ. ಹೊಸ ಜೀವನದ ಸಂತೋಷಕ್ಕಾಗಿ ಪ್ರತಿನಿತ್ಯ ಪೂಜೆ, ನಾಮಸ್ಮರಣೆ ಅಸಹಾಯಕತೆಯಿಂದ ಹೊರಬರಲು ಸಹಕಾರಿಯಾಗಿದೆ. ಮದ್ಯವರ್ಜನ ಶಿಬಿರದಲ್ಲಿ ತನ್ನ ಶಕ್ತಿಯನ್ನು ತಾನೇ ಅರ್ಥಮಾಡಿಕೊಂಡು ಬದುಕುವ ಆತ್ಮ ಸ್ಥೈರ್ಯವನ್ನು ಪಡೆಯಲು ಶ್ರೀ ಕ್ಷೇತ್ರದ ಮೂಲಕ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ ಎಂದರು.ಕಾವೇರಿ ಮಹಾ ಆರತಿ ಬಳಗದ ಸಂಚಾಲಕರಾದ ವನಿತಾ ಚಂದ್ರಮೋಹನ್ ಮಾತನಾಡಿ, ಕುಡಿತದ ದಾಸರಾದವರು ಸಮಾಜ, ಕುಟುಂಬ, ನೆಮ್ಮದಿಯ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಒಂದು ದುಶ್ಚಟ ಇಡೀ ಕುಟುಂಬದ ವಿನಾಶಕ್ಕೆ ಕಾರಣವಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ದೃಢ ಮನಸ್ಸು ಮಾಡಿ ಕುಡಿತವನ್ನು ತ್ಯಜಿಸಿ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಮೆರವಣಿಗೆ ಮೂಲಕ ತಂದ ಮದ್ಯ ರಾಕ್ಷಸನ ಅಣುಕು ಶವವನ್ನು ಸುಟ್ಟ ಮದ್ಯವರ್ಜನ ಶಿಬಿರಾರ್ಥಿಗಳು ಮುಂದಿನ ಜೀವನದಲ್ಲಿ ಮದ್ಯ ಮುಕ್ತರಾಗುವ ಬಗ್ಗೆ ಪ್ರತಿಜ್ಞೆ ಮಾಡಿದರು.ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ನಿರ್ದೇಶಕರಾದ ಲೀಲಾವತಿ, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಮೇಲ್ವಿಚಾರಕರಾದ ನಾಗರಾಜು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೆ.ಎಸ್. ರಾಜಶೇಖರ್, ಮದ್ಯವರ್ಜನ ಉಸ್ತುವಾರಿ ಅಧಿಕಾರಿ ನಂದಕುಮಾರ್ ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಧರಣಿ ಸೋಮಯ್ಯ, ಚೈತನ್ಯ, ಮದ್ಯವರ್ಜನ ಶಿಬಿರದ 50ಕ್ಕೂ ಅಧಿಕ ಶಿಬಿರಾರ್ಥಿಗಳು, ಯೋಜನೆಯ ಸೇವಾ ಪ್ರತಿನಿಧಿಗಳು, ನವ ಜೀವನ ಸಮಿತಿಯ ಸದಸ್ಯರುಗಳು ಮತ್ತಿತರರು ಇದ್ದರು.ಇದೇ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಉಸ್ತುವಾರಿ ಅಧಿಕಾರಿ ನಂದಕುಮಾರ್ ಅವರನ್ನು ಸನ್ಮಾನಿಸಲಾಯಿತು.