31ಡಿಡಬ್ಲೂಡಿ5ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‌ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರ. | Kannada Prabha
Image Credit: KP
ಪ್ರಸಕ್ತ ಸಾಲಿನ ಜಂಬೂ ಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಇವುಗಳಲ್ಲಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಢಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಧಾರವಾಡ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ ಅ. 24ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‌ಲೈನ್ ಹೊಂದಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ದೇಶ ವಿದೇಶಿಯರ ಗಮನ ಸೆಳೆದಿದೆ. ಪ್ರಸಕ್ತ ಸಾಲಿನ ಜಂಬೂ ಸವಾರಿಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಇವುಗಳಲ್ಲಿ ಆಕರ್ಷಕ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಢಾ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು. ಮತ್ತು ಸ್ತಬ್ಧಚಿತ್ರಕ್ಕೆ ನೀಡಿದ ‘ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ’ ಟ್ಯಾಗ್‌ಲೈನ್ ನೋಡುಗರನ್ನು ಆಕರ್ಷಿಸಿತು. ಜಿಲ್ಲಾ ಪಂಚಾಯಿತಿಯ ಸುಮಾರು ₹7.80 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಈ ಸ್ತಬ್ಧಚಿತ್ರವನ್ನು ಜಿಪಂ ಸಿಇಒ ಸ್ವರೂಪ ಟಿ.ಕೆ. ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಕಲಾವಿದ ಶಶಿಧರ ಗರಗ ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ಕೈ ಕಲಾ ಚಳಕದಲ್ಲಿ ನಿರ್ಮಿಸಿದ್ದರು. ಜಿಪಂ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಎ.ಎ. ತಹಶೀಲ್ದಾರ ಮತ್ತು ಹುಬ್ಬಳ್ಳಿಯ ಕೈಗಾರಿಕಾ ವಿಸ್ತರಣಾ ಅಧಿಕಾರಿ ಶಿವಾನಂದ ಕಮ್ಮಾರ ಮಾರ್ಗದರ್ಶನದಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿಒಪಿ, ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಸಿ ಕಲಾವಿದ ತಮ್ಮ ಕೈಯಿಂದ ತಯಾರಿಸಿದ್ದರು. ಇದರಲ್ಲಿ ಯಾವುದೇ ಕೃತಕ ರೂಪಕ, ವಸ್ತುಗಳನ್ನು ಬಳಸಿರಲಿಲ್ಲ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು. ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ ಎಂದು ಜಿಪಂ ಸಿಇಒ ಸ್ವರೂಪಾ ಟಿ.ಕೆ. ಸಂತಸ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.