ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಫಸಲ್ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಡಿಸಿ ಡಾ. ಸುರೇಶ ಇಟ್ನಾಳ್‌ ಅವರಿಗೆ ಮನವಿ ಸಲ್ಲಿಸಿದರು‌.

ಕುಕನೂರು: ತಾಲೂಕಿನ ಬೆಣಕಲ್ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಫಸಲ್ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಗ್ರಾಮದ ಮಹಿಳೆಯರು ಕೊಪ್ಪಳ ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಡಿಸಿ ಡಾ. ಸುರೇಶ ಇಟ್ನಾಳ್‌ ಅವರಿಗೆ ಮನವಿ ಸಲ್ಲಿಸಿದರು‌.

ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು, ಕುಟುಂಬಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗಿವೆ. ಇದರಿಂದ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ನೆಮ್ಮದಿ ಹಾಳಾಗುತ್ತಿದೆ. ಈ ಕುರಿತು ಗ್ರಾಪಂಗೆ ಮನವಿ ಸಲ್ಲಿಸಿದ್ದರೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬಿದ್ದಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸುವಂತೆ ಡಿಸಿ ಎದುರು ಮಹಿಳೆಯರು ಅವಲತ್ತುಕೊಂಡರು.

ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಗ್ರಾಪಂ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಸಿದರು.

ಈ ವೇಳೆ ಸ್ಥಳದಲ್ಲೇ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಕರೆ ಮಾಡಿದ ಜಿಲ್ಲಾಧಿಕಾರಿ ಅವರು, ಕೂಡಲೇ ಬೆಣಕಲ್ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆಗೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದರು‌.

ಸಂಸ್ಥೆಯ ಪ್ರಮುಖರಾದ ರಮೇಶ ಭಜಂತ್ರಿ, ರವಿ ಬನ್ನಿಕೊಪ್ಪ, ಶರಣಪ್ಪ ಜವಳಿ, ಮಲ್ಲಪ್ಪ ಬಳಿಗೇರಿ, ಶಿವು ಮುದೋಳ, ಇಮಾಮ್‌ಸಾಬ್‌, ನದಾಫ, ಫಕೀರಪ್ಪ ವಜ್ರಬಂಡಿ, ಸಿದ್ದಲಿಂಗಪ್ಪ ಲೇಬಗೇರಿ, ಖಜಾಸಾಬ ಕುಕನೂರು, ಬಸಮ್ಮ ಕೋಗಿಲೆ, ಭೀಮಕ್ಕ ಹಂಚಿನಾಳ, ರಾಚಮ್ಮ ಬಳಿಗೇರಿ ಇದ್ದರು.