ಸಾರಾಂಶ
- ಅಕ್ರಮ ತಡೆಗೆ ಸ್ಪಂದಿಸದಿದ್ದರೆ ಉಗ್ರ ಪ್ರತಿಭಟನೆ: ಕರವೇ ಮುಖಂಡರ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾನೂನುಬಾಹಿರವಾಗಿ ಐವರು ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಗೆ ಪ್ರಸ್ತುತ ಆಡಳಿತ ಮಂಡಳಿ ನೋಟಿಫೀಕೇಶನ್ ಹೊರಡಿಸಿದೆ. ಈ ಕ್ರಮದ ವಿರುದ್ಧ ದಾವಣಗೆರೆ ಸಹಕಾರ ಸಂಘಗಳ ಉಪನಿಬಂಧಕರು ಕೂಡಲೇ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸಹಕಾರ ಸಂಘದ ಆಡಳಿತ ಮಂಡಳಿ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದರ ಜೊತೆಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಚೀಲೂರು ಘಟಕ ಅಧ್ಯಕ್ಷ ಕರಿಬಸಪ್ಪ ಅಂಗಡಿ ಹೇಳಿದರು.ಶನಿವಾರ ಈ ಕುರಿತು ಮಾತನಾಡಿದ ಅವರು, ಪ್ರಸ್ತುತದ ಆಡಳಿತ ಮಂಡಳಿ 2020ರಲ್ಲಿ ಅಧಿಕಾರಕ್ಕೆ ಬಂದಿತ್ತು. 2024ರ ಡಿಸೆಂಬರ್‌ನಲ್ಲಿ ಇದರ ಅವಧಿ ಕೊನೆಗೊಳ್ಳಲಿದೆ. ಚುನಾವಣೆ 4 ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಹಂತದಲ್ಲಿ ಚುನಾವಣೆ ಆಯೋಗ ಆದೇಶದ ಪ್ರಕಾರ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತಿಲ್ಲ. ಆದರೂ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲ ನಿರ್ದೇಶಕರು ಈ ಆದೇಶ ನಿರ್ಲಕ್ಷಿಸಿ ಸಿಬ್ಬಂದಿ ನೇಮಕಾತಿಗೆ ನೋಟಿಫಿಕೇಶನ್ ಹೊರಡಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಡಿ.ಎನ್. ಗಿರೀಶ್ ಮಾತನಾಡಿ, ದಾವಣಗೆರೆಯ ಸಹಾಯಕ ನಿಬಂಧಕರು ಏಪ್ರಿಲ್ 2022ರಂದು ಸದರಿ ಆಡಳಿತ ಮಂಡಳಿಯನ್ನು 6 ತಿಂಗಳವರೆಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಆದೇಶದ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರಲಾಗಿದೆ. ಈ ಅವಧಿಯಲ್ಲಿ 2024ರ ಮಾರ್ಚ್ 1ರಂದು ಆಡಳಿತ ಮಂಡಳಿ ಸಭೆ ಸೇರಿ ಸಿಬ್ಬಂದಿ ನೇಮಕಾತಿಗೆ ಅನುಮತಿ ಪಡೆದುಕೊಂಡಿದ್ದಾರೆ ಎಂದು ದೂರಿದರು.ಅನಂತರ ಇನ್ನುಳಿದ ಸಿಬ್ಬಂದಿ ನೇಮಕಾತಿಗೂ ಅನುಮತಿ ಪಡೆದುಕೊಂಡಿದ್ದಾರೆ. ಆದರೆ, ಅಲ್ಲಿಂದ ಇಲ್ಲಿವರೆಗೂ ಯಾವ ನೇಮಕಾತಿಯನ್ನೂ ಮಾಡಿಕೊಳ್ಳದೇ ಸುಮ್ಮನಿದ್ದು ಚುನಾವಣೆ ಸಮೀಪಿಸಿದ ಸಂದರ್ಭ ಹಣ ಮಾಡಿಕೊಳ್ಳುವ ದುರುದ್ದೇಶದಿಂದ ಸಿಬ್ಬಂದಿ ನೇಮಕಾತಿಗೆ ತರಾತುರಿ ನಿರ್ಧಾರ ಕೈಗೊಂಡಿದ್ದಾರೆ. ಈ ವಿಷಯ ಸ್ಥಳೀಯವಾಗಿ ಬೆಳಕಿಗೆ ಬಾರದಂತೆ ಶಿವಮೊಗ್ಗದ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಣೆ ಹೊರಡಿಸಿದ್ದಾರೆ ಎಂದು ಆರೋಪಿಸಿದರು.
ಸೇವೆ ಸಲ್ಲಿಸಿದವರ ನೇಮಿಸಿ:ಸಿ.ಎಲ್. ಸತೀಶ್ ಮಾತನಾಡಿ, ಈ ಸಂಘಕ್ಕೆ 8ರಿಂದ 10 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವಿಗಳನ್ನು ನೇಮಕ ಮಾಡಿಕೊಳ್ಳಬೇಕು. ಆದರೆ, ಈಗಿನ ಆಡಳಿತ ಮಂಡಳಿ ಸೇವೆ ಸಲ್ಲಿಸಿದವರನ್ನು ಕೈ ಬಿಟ್ಟು, ಆಮಿಷಕ್ಕೊಳಗಾಗಿ ಹೊಸಬರ ನೇಮಿಸಲು ಮುಂದಾಗಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಡಿ.ಆರ್. ಮತ್ತು ಎ.ಆರ್. ಅವರು ಸಂಘಕ್ಕೆ ಭೇಟಿ ನೀಡಬೇಕು. ಈ ಕುರಿತು ಕೂಲಂಕಶವಾಗಿ ಪರಿಶೀಲಿಸಿ, ಆಡಳಿತ ಮಂಡಳಿ ತೀರ್ಮಾನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘದ ಕಚೇರಿಗೆ ಬೀಗ ಜಡಿಯಲಾಗುವುದು. 7 ಗ್ರಾಮಗಳ ಷೇರುದಾರರೊಂದಿಗೆ ಉಗ್ರ ಮತ್ತು ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭ ತಾಪಂ ಮಾಜಿ ಅಧ್ಯಕ್ಷ ಡಿ.ಜಿ.ರಾಜಪ್ಪ, ಸಿ.ಎಲ್. ಸತೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಜಿ. ಸೋಮಶೇಖರ್, ಗ್ರಾ.ಪಂ. ಸದಸ್ಯರಾದ ಚನ್ನಯ್ಯ, ಹಾಲೇಶಪ್ಪ, ತೆಗ್ಗಿಹಳ್ಳಿ ನಾಗರಾಜ್, ಮಹೇಂದ್ರ, ವಿಎಸ್‍ಎಸ್‍ಎನ್ ಮಾಜಿ ಸದಸ್ಯ ಬಸವರಾಜ್ ಇತರರು ಇದ್ದರು.- - - (-ಫೋಟೋ ಬಳಸಬೇಡಿ.)