ಭದ್ರಾ ಬಲದಂಡೆಯ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ: ಹಿರಣಯ್ಯ

| Published : Jul 04 2025, 12:32 AM IST

ಭದ್ರಾ ಬಲದಂಡೆಯ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸಿ: ಹಿರಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಬಫರ್ ಜೋನ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಿರಣಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಭದ್ರಾ ಬಲದಂಡೆ ನಾಲೆಯನ್ನು ಸೀಳಿ ಬಫರ್ ಜೋನ್ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಿರಣಯ್ಯ ತಿಳಿಸಿದರು.

ಅವರು ಸಮೀಪದ ಅರಹತೊಳಲು-ಕೈಮರದ ಎನ್.ಡಿ. ಸುಂದರೇಶ್ ರವರ ವೃತ್ತದಲ್ಲಿ ಸರ್ಕಾರದ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಾತನಾಡಿ, ಕಡೂರು, ಬೀರೂರು, ತರೀಕೆರೆ, ಅಜ್ಜಂಪುರ ಹಾಗೂ ಹೊಸದುರ್ಗ ತಾಲೂಕುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಮ್ಮ ಸಂಘಟನೆಯಿಂದ ಕುಡಿಯುವ ನೀರಿಗೆ ಯಾವುದೇ ತಕರಾರು ಇಲ್ಲ. ಆದರೆ, ಭದ್ರಾ ಬಲದಂಡೆ ನಾಲೆಯನ್ನು ಸೀಳಿ ನಮಗೆ ಬರುವ ನೀರು ಹಾಗೂ ಕಾಮಗಾರಿಯೂ ಅವೈಜ್ಞಾನಿಕವಾಗಿದ್ದು, ಇದು ಮುಂದಿನ ದಿನಗಳಲ್ಲಿ ಡ್ಯಾಮ್‌ಗೂ ಕೂಡ ಅಪಾಯಕಾರಿಯಾಗಿದೆ. ಇದೆಲ್ಲ ಗೊತ್ತಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ ಎಂದರು.

ಕಳೆದ ಕೆಲವು ವರ್ಷಗಳಿಂದ ಅಚ್ಚುಕಟ್ಟುದಾರರಿಗೆ ಸಮರ್ಪಕವಾದ ನೀರು ನಿರ್ವಹಣೆ ಮಾಡುವ ಅವಕಾಶವಿದ್ದರೂ, ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ, ಕಾಲುವೆಗಳ ದುರಸ್ಥಿಗೆ ಅನುದಾನ ಬಿಡುಗಡೆಗೊಳಿಸದ ಜನಪ್ರತಿನಿಧಿಗಳ ಬೇಜವಾಬ್ದಾರಿ, ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರೈತರ ಅಸಹಾಯಕತೆಯಿಂದ ಇಂಥಹ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಕುಡಿಯುವ ನೀರಿಗಾಗಿ ಒಬ್ಬರ ಹೊಟ್ಟೆಯ ಮೇಲೆ ಹೊಡೆಯುವ ಬದಲು ಸರ್ಕಾರಕ್ಕೆ ಬೇರೆ ರೀತಿಯ ಅನೇಕ ಮಾರ್ಗಗಳಿಗೆ ಆ ನಿಟ್ಟಿನಲ್ಲಿ ಯೋಚಿಸಿ ಈಗ ನಡೆಯುತ್ತಿರುವ ಕಾಮಗಾರಿಯನ್ನು ನಿಲ್ಲಿಸಿ, ನಾಲೆಗೆ ತಡೆಗೋಡೆ ನಿರ್ಮಿಸಿ, ಜು.10ರ ಒಳಗೆ ಬಲದಂಡೆ ನಾಲೆಗೆ ನೀರು ಹರಿಸಬೇಕು ಎಂದರು.

ಈ ಕಾಮಗಾರಿಗೆ ಕಾನೂನು ಬಾಹಿರವಾಗಿ ಅವಕಾಶ ನೀಡಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ರೈತರ ಹಿತ ಕಾಪಾಡುವಲ್ಲಿ ಸರ್ಕಾರ ಪದೇ ಪದೇ ಎಡವುತ್ತಿದೆ. ಕೆಲವು ನಾಯಕರು ಏಕಾಏಕಿ ತೀರ್ಮಾನ ಕೈಗೊಂಡು ರಾಜ್ಯ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥೇಶ್ವರ, ತಾಲೂಕು ಕಾರ್ಯದರ್ಶಿ ರಾಮಚಂದ್ರರಾವ್, ವಲಯ ಕಾರ್ಯದರ್ಶಿ ಡಿ.ವಿ. ವೀರೇಶ್, ಕೃಷ್ಣಪ್ಪ ಸೇರಿದಂತೆ ಇತರರಿದ್ದರು.

ಚಾಲೆಂಜ್ ಮಾಡೋದು ಬಿಡಲಿ: ಹಿರಣಯ್ಯ

ಹೊಸದುರ್ಗದ ಶಾಸಕ ಗೋವಿಂದಪ್ಪ ಮೊನ್ನೆ ಹೊಸದುರ್ಗದಲ್ಲಿ ನಡೆದ ಸಭೆಯಲ್ಲಿ ರೈತರ ಮೇಲೆ ಚಾಲೆಂಜ್ ಮಾಡುತ್ತಿದ್ದಾರೆ. ನಿಮ್ಮನ್ನು ಆಯ್ಕೆ ಮಾಡಿರುವುದು ಅಭಿವೃದ್ಧಿ ಕೆಲಸಕ್ಕೆ ಹೊರತು ಬಡವರು ಹಾಗೂ ರೈತರ ಮೇಲೆ ಚಾಲೆಂಜ್ ಮಾಡುವುದಕ್ಕೆ ಅಲ್ಲ. ನೀರು ಕುಡಿಯುವುದಕ್ಕೆ ಎಲ್ಲರಿಗೂ ಅನಿವಾರ್ಯ ಆದ ಕಾರಣ ಸುಮ್ಮನಿದ್ದೇವೆ. ಇಲ್ಲದೇ ಹೋದರೆ ಯಾವುದೇ ಕಾರಣಕ್ಕೂ ಒಂದು ಹನಿಕೂಡ ಬಿಡುತ್ತಿರಲ್ಲಿಲ್ಲ. ಶಿವಮೊಗ್ಗ ಹಾಗೂ ದಾವಣಗೆರೆ ರೈತರ ಬಗ್ಗೆ ತಿಳಿದಿಲ್ಲ. ಅವರ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಎಚ್ಚರಿಸಿದರು.