ಸಾರಾಂಶ
ಕೊಪ್ಪಳ : ತುಂಗಭದ್ರಾ ಜಲಾಶಯ ಮುರಿದ 19ನೇ ಕ್ರಸ್ಟ್‌ಗೇಟ್‌ಗೆ ಪರ್ಯಾಯವಾಗಿ ಸ್ಟಾಪ್ ಗೇಟ್ ಅಳವಡಿಸಿದ ಬಳಿಕವೂ ಆಗುತ್ತಿದ್ದ ಅಲ್ವಸ್ವಲ್ಪ ಸೋರಿಕೆಯನ್ನು ಭಾನುವಾರ ಶಿವಮೊಗ್ಗದ ಡೈವ್ ತಂಡ ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ, ಈಗ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ದಿನೇ ದಿನೇ ಏರಿಕೆಯಾಗುತ್ತಿದ್ದು, ಭಾನುವಾರ ಸಂಜೆಯ ವೇಳೆಗೆ 73 ಟಿಎಂಸಿಯಾಗಿದೆ.
ತುಂಗಭದ್ರಾ ಜಲಾಶಯದಲ್ಲಿ ಎಲಿಮೆಂಟ್ ಗೇಟ್ ಅಳವಡಿಸಿದ ಮೇಲೆ 100 ಕ್ಯುಸೆಕ್‌ಗೂ ಅಧಿಕ ನೀರು ಸೋರಿಕೆಯಾಗುತ್ತಿತ್ತು. ಆದರೆ, ಮುಳುಗು ತಜ್ಞರು ಆಗಮಿಸಿ, ಸೋರಿಕೆಯನ್ನು ಸಂಪೂರ್ಣ ಬಂದ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಈಗ ಜಲಾಶಯದಿಂದ ಸೋರಿಕೆ ಸಂಪೂರ್ಣ ನಿಲುಗಡೆಯಾಗಿದೆ.
73 ಟಿಎಂಸಿ ನೀರು:
ಎಲಿಮೆಂಟ್ ಗೇಟ್ ಅಳವಡಿಸಿದ್ದರಿಂದ 71 ಟಿಎಂಸಿ ಇದ್ದ ನೀರು ಈಗ ಒಳಹರಿವು ಬರುತ್ತಲೇ ಇರುವುದರಿಂದ ಭಾನುವಾರ ಸಂಜೆಯ ವೇಳೆಗೆ ಬರೋಬ್ಬರಿ 73 ಟಿಎಂಸಿಯಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಶಿವರಾಜ ತಂಗಡಗಿ ಹೇಳಿದರು.
''ಕನ್ನಡಪ್ರಭ''ದೊಂದಿಗೆ ಮಾತನಾಡಿದ ಅವರು, ಅಂತೂ ನಮ್ಮ ಪ್ರಯತ್ನ ಫಲಿಸಿದೆ. ಸೋರಿಕೆಯನ್ನು ಸಹ ಸಂಪೂರ್ಣವಾಗಿ ತಡೆದಿರುವುದರಿಂದ ಈಗ ಜಲಾಶಯದಲ್ಲಿ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಳವಾಗುತ್ತಿದೆ. ಜಲಾಶಯಕ್ಕೆ 35-40 ಸಾವಿರ ಕ್ಯುಸೆಕ್ ಹರಿದು ಬರುತ್ತಿದ್ದು, ಇದು ಹೆಚ್ಚಳವಾಗುತ್ತಲೇ ಇದೆ. ಈಗ ಪ್ರತಿದಿನ 2-3 ಟಿಎಂಸಿ ನೀರು ಸಂಗ್ರಹವಾಗಲಿದೆ. ಹೀಗಾಗಿ, ಜಲಾಶಯ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಮತ್ತೆ ಭರ್ತಿಯಾಗಲಿದೆ. ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿ, ಬಾಗಿನ ಅರ್ಪಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯಕ್ಕೆ ಎಲಿಮೆಂಟ್ ಗೇಟ್ ಅಳವಡಿಸಿ, ನೀರು ಸೋರಿಕೆಯನ್ನು ನಿಲ್ಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಸಂತೋಷ ವ್ಯಕ್ತಪಡಿಸಿದ್ದಾರೆ. ಎಂಜಿನಿಯರ್‌ಗಳ ಕಾರ್ಯ ಶ್ಲಾಘನೀಯ ಎಂದಿದ್ದಾರೆ. ಹಾಗೆ ಎಲಿಮೆಂಟ್ ಗೇಟ್ ಅಳವಡಿಸಿದ ಬಳಿಕವೂ ಇದ್ದ ಸೋರಿಕೆಯನ್ನು ಶಿವಮೊಗ್ಗ ಡೈವ್ ತಂಡ ಬಂದು ಕಾರ್ಯಾಚರಣೆ ನಡೆಸಿ, ತಡೆಗಟ್ಟಿದೆ ಎಂದರು.
ಒಂದು ಬೆಳೆಗಂತೂ ನಿರಾತಂಕ:
ತುಂಗಭದ್ರಾ ಜಲಾಶಯದಲ್ಲಿ ಈಗಿರುವ 73 ಟಿಎಂಸಿ ನೀರು ಹಾಗೂ ಒಳಹರಿವು ಲೆಕ್ಕಾಚಾರದಲ್ಲಿ ಒಂದು ಬೆಳೆಗಂತೂ ನೀರು ಸಮಸ್ಯೆಯಾಗುವುದಿಲ್ಲ ಎಂದು ಸಚಿವ ತಂಗಡಗಿ ಹೇಳಿದರು.
ಆಗಸ್ಟ್ ಕೊನೆಯ ವಾರದಲ್ಲಿ ಹಾಗೂ ನಂತರವೂ ಹಿಂಗಾರು ಮಳೆಯಾಗಿ, ಒಳಹರಿವು ಹೆಚ್ಚಳವಾದರೆ ಹಿಂಗಾರು ಬೆಳೆಗೂ ನೀರು ಲಭ್ಯ ಆಗುವ ವಿಶ್ವಾಸವಿದೆ ಎಂದರು.