ಬಿರುಗಾಳಿ ಸಹಿತ ಮಳೆ: ಹಾರಿ ಹೋದ ಮನೆಯ ಮೇಲ್ಛಾವಣಿ

| Published : May 24 2024, 12:49 AM IST

ಬಿರುಗಾಳಿ ಸಹಿತ ಮಳೆ: ಹಾರಿ ಹೋದ ಮನೆಯ ಮೇಲ್ಛಾವಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ತುಳಸಿಗೇರಿ, ದೇವನಾಳ, ಛಬ್ಬಿ ಭಾಗದಲ್ಲಿ ಗಿಡಮರ, ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ತೋಟಗಾರಿಕೆ ಬೆಳೆಗಳು ಹಾನಿಗೊಂಡಿವೆ.

ಕನ್ನಡಪ್ರಭ ವಾರ್ತೆ ಕಲಾದಗಿಗುರುವಾರ ಸಂಜೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ತುಳಸಿಗೇರಿ, ದೇವನಾಳ, ಛಬ್ಬಿ ಭಾಗದಲ್ಲಿ ಮರ ಗಿಡ, ಕಬ್ಬಿನ ಬೆಳೆ, ಟೊಮ್ಯಾಟೋ ಬೆಳೆ, ರಸ್ತೆ ಬದಿಯ ಗೂಡಂಗಡಿಗಳು, ತೆಂಗಿನ ಗಿಡಗಳು, ವಿದ್ಯುತ್ ಕಂಬ, ತಗಡಿನ ಶೆಡ್‌ಗಳು ನೆಲಕ್ಕುರುಳಿದ್ದು, ಕೆಲ ಮನೆಗಳು ಮೇಲ್ಚಾವಣಿಯ ತಗಡಿನ ಶೀಟ್‌ ಗಳು ಹಾರಿ ಹೋಗಿ, ಮನೆಯಲ್ಲಿನ ವಸ್ತುಗಳು, ಪಾತ್ರೆಗಳು ಚೆಲ್ಲಾಪಿಲ್ಲಿಯಾದ ಬಗ್ಗೆ ವರದಿಯಾಗಿದೆ.

ಛಬ್ಬಿ ಕ್ರಾಸ್‌ದಿಂದ ಹಿಡಿದು ತುಳಸಿಗೇರಿ ಮಾರುತೇಶ್ವರ ದೇವಸ್ಥಾನದವರೆಗೂ ರಸ್ತೆಯ ಎರಡೂ ಬದಿಯಲ್ಲಿನ ಅನೇಕ ಬೃಹತ್ ಗಾತ್ರದ ಮರಗಳು, ಜಾಲಿಯ ಕಂಟಿಗಳು ಬಿರುಗಾಳಿಗೆ ಬಡ ಮೇಲಾಗಿ ಬಿದ್ದಿವೆ. ಕೆಲ ಮರಗಳ ಬೃಹತ್ ಗಾತ್ರದ ರೆಂಬೆಗಳು ತುಂಡರಿಸಿ ರಸ್ತೆ ಪಕ್ಕ ಬಿದ್ದಿವೆ. ಅಕ್ಕಪಕ್ಕದ ತೋಟದಲ್ಲಿನ ಗಿಡ ಮರಗಳುಗೂ ಸೇರಿದಂತೆ ಬಾಳೆ, ಕಬ್ಬು, ತೆಂಗಿನ ಮರಗಳು ನೆಲಕ್ಕುರುಳಿ ನಾಶವಾಗಿದ್ದು, ರೈತರಿಗೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ತೋಟಗಳಲ್ಲಿನ ತಗಡಗಿನ ಶೆಡ್‌ಗಳು, ಗೂಡಂಗಡಿಗಳ ತಗಡುಗಳು ಹಾರಿ ಹೋಗಿವೆ. ತುಳಸಿಗೇರಿ ಮಾರುತೇಶ್ವರ ದೇವಾಲಯದ ಮುಂಭಾಗದಲ್ಲಿನ ಬೃಹತ್ ಮರಗಳು ಧರೆಗುರುಳಿದ್ದು, ಕೆಲ ಮರಗಳ ರೆಂಬೆ-ಕೊಂಬೆಗಳು ತುಂಡರಿಸಿ ಬಿದ್ದಿವೆ. ಛಬ್ಬಿಯ ಯಲ್ಲಪ್ಪ ದೇವನ್ನವರ ಅವರ ಟ್ರ್ಯಾಕ್ಟರ್ ಮೇಲೆ ಮರಬಿದ್ದು ಹಾನಿಯಾಗಿದೆ. ಚಹಾ ದಂಗಡಿ, ವ್ಯಾಪಾರಸ್ಥರ ತಗಡಿನ ಅಂಗಡಿಗಳ ಮುಂಂಭಾಗದ ತಗಡುಗಳು ಹಾರಿ ಹೋಗಿವೆ.

ಟ್ರಾಫಿಕ್ ಜಾಮ್: ಸಂಜೆ ಬೀಸಿದ ಬಿರುಗಾಳಿಗೆ ಗಿಡ ಮರಗಳು ರಾಯಚೂರು ಬೆಳಗಾವಿ ರಾಜ್ಯ ಹೆದ್ದಾರಿ ರಸ್ತೆಗೆ ಬಿದ್ದು ಕೆಲಕಾಲ ಟ್ರಾಪಿಕ್ ಜಾಮ್ ಉಂಟಾಗಿತ್ತು, ಛಬ್ಬಿ ಕ್ರಾಸ್‌ದಿಂದ ಹಿಡಿದು ತುಳಸಿಗೇರಿ ವರೆಗೂ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿ ವಾಹನ ಸವಾರರು ಪರದಾಡಿದರು.ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಿ:

ತುಳಸಿಗೇರಿ, ದೇವನಾಳ, ಛಬ್ಬಿ ಗ್ರಾಮದಲ್ಲಿ ಮಳೆ ಗಾಳಿಗೆ ಉಂಟಾದ ಹಾನಿಯನ್ನು ತಕ್ಷಣವೇ ವೀಕ್ಷಣೆ ಮಾಡಿ ಸರ್ವೆ ಮಾಡಲು ಜಿಲ್ಲಾಧಿಕಾರಿ, ಉಪವಿಭಾಧಿಕಾರಿ, ತಹಸೀಲ್ದಾರ್‌, ಕೃಷಿ ಅಧಿಕಾರಿಗಳಿಗೆ, ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹಟ್ಟಿ ಚಿನ್ನದ ಗಣಿ ಅಧ್ಯಕ್ಷ, ಶಾಸಕ ಜೆ.ಟಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆ ಜೊತೆಗೆ ಮಾತನಾಡಿದ ಅವರು, ಬೀಸಿದ ಬಿರುಗಾಳಿ ಸಹಿತ ಮಳೆಗೆ ತುಳಸಿಗೇರಿ, ಛಬ್ಬಿ, ದೇವನಾಳ ಭಾಗದಲ್ಲಿ ಬೆಳೆ, ಮನೆ ಹಾನಿಯಾಗಿವೆ, ವಿದ್ಯುತ್ ಕಂಬಗಳು ಧರೆಗುರುಳಿವೆ ಇದರಿಂದ ರೈತರಿಗೆ, ಜನರಿಗೆ ತೊಂದರೆಯಾಗಿದ್ದು, ಕೂಡಲೇ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ವೀಕ್ಷಣ ಮಾಡಲು ತಿಳಿಸಿದ್ದು, ಧರೆಗುರುಳಿದ ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬಗಳನ್ನು ನಾಳೆಯಿಂದಲೇ ಸರಿ ಪಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಯುದ್ಧೋಪಾದಿಯಲ್ಲಿ ಕಾರ್ಯ ಕೈಗೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.