ಸಾರಾಂಶ
ಪಟ್ಟಣದ ಪ್ರತಿ ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮಕ್ಕಳು, ವೃದ್ಧರು ಹೊರಗಡೆ ಬರುವುದೇ ಕಷ್ಟಕರವಾಗಿದೆ.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ಪ್ರತಿ ವಾರ್ಡ್‌ಗಳಲ್ಲೂ ಬೀದಿನಾಯಿಗಳ ಹಾವಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮಕ್ಕಳು, ವೃದ್ಧರು ಹೊರಗಡೆ ಬರುವುದೇ ಕಷ್ಟಕರವಾಗಿದೆ. ಪಪಂ ವ್ಯಾಪ್ತಿಯ 6ನೇ ವಾರ್ಡಿನಲ್ಲಿ ಗಣಪತಿ ಮೂರ್ತಿ ನೋಡಲು ಹೋಗಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಗುರುವಾರ ದಾಳಿ ಮಾಡಿದ್ದು, ಬಾಲಕನ ಕೈ ಕಾಲಿಗೆ ತೀವ್ರ ಗಾಯಗಳಾಗಿವೆ.ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿವಾಸಿ ಶಿವಶಂಕರ್ ಮಾತನಾಡಿ, 6ನೇ ವಾರ್ಡಿನಲ್ಲಿ ತುಂಬಾ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. 15 ವಾರ್ಡ್‌ಗಳಲ್ಲೂ ಯಮನ ರೂಪದಲ್ಲಿ ನಾಯಿಗಳ ಹಿಂಡು ಬರುತ್ತಿದೆ. ಎಲ್ಲಿ ನೋಡಿದರೂ, ಯಾವ ಏರಿಯಾ ನೋಡಿದರೂ ಗುಂಪು ಗುಂಪು ಬೀದಿ ನಾಯಿಗಳೇ ಕಾಣುತ್ತವೆ ಎಂದರು.ನಾಯಿಗಳ ದಾಳಿಗೆ ಒಳಗಾದ ಯುವಕನ ತಾಯಿ ರೇಣುಕಾ ಮಾತನಾಡಿ, ಪಕ್ಕದ ಬೀದಿಯಲ್ಲಿ ಗಣಪತಿಯನ್ನು ಕೂರಿಸಿದ್ದನ್ನು ನಮ್ಮ ಮಗ ನೋಡಲು ಹೋದಾಗ ಬೀದಿ ನಾಯಿಗಳು ದಾಳಿ ಮಾಡಿವೆ. ನಮ್ಮ ಮಗನಿಗೆ ಆದ ಪರಿಸ್ಥಿತಿ ಬೇರೆ ಯಾರ ಮಕ್ಕಳಿಗೂ ಆಗದಿರಲಿ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು ಬೀದಿ ನಾಯಿಗಳ ಹಾವಳಿಂದ ಜನರಿಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿದರು.