ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗರಿಗೆದರಿದ್ದು ಹಲವು ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಎನ್.ವಿ.ಪರಮೇಶ್ವರಯ್ಯ ಸಮ್ಮುಖದಲ್ಲಿ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಆಯ್ಕೆ ಪತ್ರ ವಿತರಿಸಲಾಯಿತು. ನಗರ ಮಂಡಲದ ನೂತನ ಉಪಾಧ್ಯಕ್ಷರನ್ನಾಗಿ ಭೀಮನಗರದ ವಕೀಲ ಎನ್.ಬಸವರಾಜು, ಆನಂದ ಜ್ಯೋತಿ ಕಾಲೋನಿಯ ಗೋಪಾಲ್, ಉಪ್ಪಾರ ಮೋಳೆಯ ಚಂದ್ರು, ದಕ್ಷಿಣ ಬಡಾವಣೆಯ ಮಣಿಕಂಠಪ್ರಸಾದ್, ಬಸ್ತೀಪುರ ಚನ್ನಮಲ್ಲು, ಮಠದಬೀದಿಯ ಮಹಾದೇವ ಪ್ರಸಾದ್ ಅವರನ್ನು ನೇಮಿಸಲಾಗಿದೆ. ಕಾರ್ಯದರ್ಶಿಗಳನ್ನಾಗಿ ಉಪ್ಪರಮೋಳೆ ಮಂಜು, ಮುಡಿಗುಂಡ ಹನುಮಂತ, ಬಸ್ತೀಪುರ ಶಿವಪ್ರಸಾದ್ (ಪರಶಿವ), ಲಿಂಗಣಾಪುರ ಕಿರಣ್, ಪೀಸ್ ಪಾರ್ಕ್ ರಸ್ತೆಯ ಸಂಪತ್, ಸಿ.ಕೆ.ಎಂ.ರಸ್ತೆ ಉತ್ತಮ್, ಖಜಾಂಚಿಗಳಾಗಿ ದಿನೇಶ್ ಗುಪ್ತ ಅವರನ್ನು ನೇಮಕ ಮಾಡಲಾಗಿದೆ. ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕವಿತಾ, ಎಸ್ ಸುಂದ್ರಪ್ಪರನ್ನು ನೇಮಕಗೊಳಿಸಿ ಆದೇಶ ಪತ್ರವನ್ನು ನೀಡಲಾಯಿತು.
ನಗರ ಮಂಡಲದ ವಿವಿಧ ಮೋರ್ಚಾ ಅಧ್ಯಕ್ಷರ ನೇಮಕ: ಭಾರತೀಯ ಜನತಾ ಪಾರ್ಟಿಯ ರೈತ ಮೋರ್ಚಾ ಅಧ್ಯಕ್ಷರಾಗಿ ಮುಡಿಗುಂಡ ಪಿ.ಸುರೇಶ್, ಎಸ್.ಟಿ ಮೋರ್ಚಾ ಅಧ್ಯಕ್ಷರಾಗಿ ಮುಡಿಗುಂಡ ನಂಜುಂಡನಾಯ್ಕ, ಎಸ್.ಸಿ ಅಧ್ಯಕ್ಷರಾಗಿ ಭೀಮನಗರ ಸಿದ್ದಪ್ಪ, ಯುವ ಮೋರ್ಚಾ ಅಧ್ಯಕ್ಷರಾಗಿ ಕಾವೇರಿ ರಸ್ತೆಯ ಪಿ.ಆನಂದ್ ನೇಮಕಗೊಳಿಸಿ ಆದೇಶ ಪತ್ರ ವಿತರಣೆ ಮಾಡಲಾಯಿತು. ಚುನಾವಣೆಗೆ ಸಜ್ಜಾಗಿ:ಆದೇಶ ಪತ್ರ ವಿತರಿಸಿದ ನಗರ ಮಂಡಲ ಅಧ್ಯಕ್ಷ ಪರಮೇಶ್ವರಯ್ಯ ಮಾತನಾಡಿ, ಭಾರತೀಯ ಜನತಾ ಪಾರ್ಟಿಯ ಸಂಘಟನಾತ್ಮಕ ದೃಷ್ಟಿಯಿಂದ ನಗರ ಮಂಡಲಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ನೂತನ ಪದಾಧಿಕಾರಿಗಳು ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗಿ ಎಂದರು. ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಇಂದು ವಿವಿಧ ನಗರ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರ ವಿತರಿಸಲಾಗಿದೆ. ಆಯ್ಕೆಗೊಂಡ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಮುಖಂಡರ ಸಹಭಾಗಿತ್ವದೊಂದಿಗೆ ಮುಂಬರುವ ಚುನಾವಣೆಗೆ ಸಜ್ಜಾಗಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿ, ಬಿಜೆಪಿಯ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ, ಯಾರೇ ಲೋಕಸಭಾ ಅಭ್ಯರ್ಥಿಯಾದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಸ್ಪಂದಿಸಿ. - ಎನ್ ವಿ ಪರಮೇಶ್ವರಯ್ಯ, ಅಧ್ಯಕ್ಷ, ಭಾಜಪ ನಗರ ಮಂಡಲ