ಒತ್ತಡ, ಜೀವನ ಶೈಲಿ, ಹೃದಯಾಘಾತಕ್ಕೆ ಕಾರಣ: ಶಾಸಕ ಬಸವರಾಜ ಶಿವಣ್ಣನವರ

| Published : Jul 28 2025, 12:33 AM IST

ಸಾರಾಂಶ

ಚಿಕ್ಕ ವಯಸ್ಸಿನ ಮಕ್ಕಳು ಸಹ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಇದನ್ನು ತಡೆಗಟ್ಟಲು ಮತ್ತೆ ನಾವೆಲ್ಲರೂ ಹಳೆಯ ಆಹಾರ ಪದ್ಧತಿ, ಆರೋಗ್ಯಕರ ಜೀವನ ಶೈಲಿ ಅನುಕರಣೆ ಮಾಡುವ ಅವಶ್ಯಕತೆಯಿದೆ.

ಬ್ಯಾಡಗಿ: ಒತ್ತಡದ ಬದುಕು ಹಾಗೂ ಬದಲಾದ ಜೀವನ ಶೈಲಿ ಹಾಗೂ ಅಧಿಕ ಜಂಕ್ ಫುಡ್‌ಗಳ ಸೇವನೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್, ಇನ್ನರ್‌ವೀಲ್ ಕ್ಲಬ್ ಮತ್ತು ಎಸ್ಎಸ್ ನಾರಾಯಣ ಹೆಲ್ತ್ ಕೇರ್ ಸೆಂಟರ್ ದಾವಣಗೆರೆ ಇವರ ಆಶ್ರಯದಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಚಿಕ್ಕ ವಯಸ್ಸಿನ ಮಕ್ಕಳು ಸಹ ಹೃದಯಘಾತಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿ. ಇದನ್ನು ತಡೆಗಟ್ಟಲು ಮತ್ತೆ ನಾವೆಲ್ಲರೂ ಹಳೆಯ ಆಹಾರ ಪದ್ಧತಿ, ಆರೋಗ್ಯಕರ ಜೀವನ ಶೈಲಿ ಅನುಕರಣೆ ಮಾಡುವ ಅವಶ್ಯಕತೆಯಿದೆ ಎಂದರು.ಹೃದಯರೋಗ ತಜ್ಞವೈದ್ಯ ಡಾ. ರಾಕೇಶ ಮಾತನಾಡಿ, ತಂತ್ರಜ್ಞಾನ ಬೆಳೆದಂತೆಲ್ಲ ಮನುಷ್ಯ ಆಲಸಿಯಾಗುತ್ತಿದ್ದಾನೆ. ದೈಹಿಕ ಶ್ರಮ ಮಾಯವಾಗಿದ್ದು, ಮೊಬೈಲ್ ಸೇರಿದಂತೆ ಹಲವು ಗೆಜೆಟ್‌ಗಳ ಬಳಕೆ ಹೆಚ್ಚಾಗಿದ್ದು, ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಸಂಸ್ಕರಿಸದ ಆಹಾರ ಪದಾರ್ಥಗಳ ಬಳಕೆ ಪೆಟ್ರೋಲಿಯಂ ಎಣ್ಣೆ ಬಳಕೆ ಸೇರಿದಂತೆ ಹಲವು ಆಹಾರ ಪದಾರ್ಥಗಳ ಬಳಕೆಯನ್ನ ಕೈಬಿಟ್ಟು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳುವಂತೆ ಸೂಚನೆ ನೀಡಿದರು. ಶಿಬಿರದಲ್ಲಿ ಒಟ್ಟು 130 ಜನ ಸಾರ್ವಜನಿಕರು ಸದುಪಯೋಗ ಪಡೆದುಕೊಂಡರು. ಈ ವೇಳೆ ರೋಟರಿ ಕ್ಲಬ್ಬಿನ ಮಾಜಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ರೋಟರಿ ಅಧ್ಯಕ್ಷ ಅನಿಲಕುಮಾರ ಬೊಡ್ಡಪಾಟಿ, ಇನ್ನರ್‌ ವೀಲ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಮತ್ತು ಸದಸ್ಯರಾದ ಪರಶುರಾಮ ಮೇಲಗಿರಿ, ಆನಂದಗೌಡ ಸೊರಟೂರ, ಕಿರಣ ಮಾಳೇನಹಳ್ಳಿ, ರಮೇಶ ಕಲ್ಯಾಣಿ, ಮಾಲತೇಶ ಅರಳಿಮಟ್ಟಿ, ಸತೀಶ ಅಗಡಿ, ಶಿವರಾಜ ಚೂರಿ, ಬಸವರಾಜ ಸುಂಕಾಪುರ, ಪವಾಡಪ್ಪ ಆಚನೂರ, ಸಿದ್ದಲಿಂಗೇಶ ಮಾಳೇನಹಳ್ಳಿ, ವಿಶ್ವನಾಥ ಅಂಕಲಕೋಟಿ, ಲಕ್ಷ್ಮೀ ಉಪ್ಪಾರ, ಪುಷ್ಪಾ ಇಂಡಿಮಠ, ಸಂಧ್ಯಾರಾಣಿ ದೇಶಪಾಂಡೆ, ಗೀತಾ ಎಲಿ, ವಿಜಯಲಕ್ಷ್ಮಿ ಪಾಟೀಲ, ವೈದ್ಯರಾದ ಸುರೇಶ ಗುಂಡಪಲ್ಲಿ, ಮಹೇಶ ಭಜಂತ್ರಿ ಇತರರು ಉಪಸ್ಥಿತರಿದ್ದರು.