ಒತ್ತಡದ ಜೀವನ ಹೃದ್ರೋಗಕ್ಕೆ ಕಾರಣ

| Published : Oct 01 2024, 01:17 AM IST

ಸಾರಾಂಶ

ಮಧ್ಯಪಾನ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಹಾಗೂ ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಕನಿಷ್ಠ ಶೇ 80ರಷ್ಟು ಅಕಾಲಿಕ ಮರಣಗಳನ್ನು ತಪ್ಪಿಸಬಹುದುದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಧುನಿಕ ಕಾಲದ ಜೀವನದ ಒತ್ತಡಗಳು ಹೆಚ್ಚು ಕೊಬ್ಬಿನಾಂಶವಿರುವ ಆಹಾರ ಸೇವನೆ ಹಾಗು ದೈಹಿಕ ಚಟುವಟಿಕೆಗಳಿಲ್ಲದೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆಂದು ಶಾಂತಾ ಆರೋಗ್ಯ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಡಾ.ನವೀನ್‌ ಸೈಮನ್‌ ಅಭಿಪ್ರಾಯಪಟ್ಟರು.

ತಾಲೂಕಿನ ಪೆರೇಸಂದ್ರದ ಶಾಂತಾ ಆರೋಗ್ಯ ಶಿಕ್ಷಣ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಹೃದಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮತೂಕ ಆಹಾರ ಸೇವನೆ, ಮಾನಸಿಕ ಆರೋಗ್ಯ , ದೈಹಿಕ ಚಟುವಟಿಕೆಗಳು ಹಾಗೂ ಕ್ರಿಯಾಶೀಲತೆಯಿಂದ ಹೃದಯದ ಆರೋಗ್ಯವನ್ನು ಸ್ಥಿರವಾಗಿಟ್ಟುಕೊಳ್ಳಬಹುದು ಎಂದರು.

ಸಮತೋಲನ ಆಹಾರ ಬಳಸಿ

ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯದ ಕಾರ್ಯ ಏರುಪೇರಾಗಿ ಹೃದಯಾಘಾತಗಳು ಸಂಭವಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಅಧಿಕ ರಕ್ತದೊತ್ತಡ, ಮಧ್ಯಪಾನ, ಧೂಮಪಾನ, ಶರೀರದ ತೂಕ ಹೆಚ್ಚಳ, ಡಯಾಬಿಟಿಸ್‌ಗಳು ಕಾರಣವಾಗಿದ್ದು ನಿಯಮಿತ ಆಹಾರ ಸೇವನೆ, ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಚಟುವಟಿಕೆಗಳಿಂದ ಹೃದಯದ ಆರೋಗ್ಯ ಸ್ಥಿರಗೊಳ್ಳುತ್ತದೆ ಎಂದು ಸಲಹೆ ನೀಡಿದರು.

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿಯ ಇಗ್ನೊ ಆರೋಗ್ಯ ಶಾಲೆಯ ಡಾ.ನೀರಜ್‌ ಸೂದ್‌ ಮಾತನಾಡಿ, ಮಧ್ಯಪಾನ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ ಹಾಗೂ ಜಡಜೀವನಶೈಲಿಯಂತಹ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸುವ ಮೂಲಕ, ಹೃದ್ರೋಗ ಮತ್ತು ಪಾರ್ಶ್ವವಾಯುಗಳಿಂದ ಕನಿಷ್ಠ ಶೇ 80ರಷ್ಟು ಅಕಾಲಿಕ ಮರಣಗಳನ್ನು ತಪ್ಪಿಸಬಹುದುದು ಎಂದರು.

ಹೃದಯ ಆರೋಗ್ಯ ಕುರಿತು ಅರಿವು ಮತ್ತು ಮಾಹಿತಿ ನೀಡುವ ಹಾಗೂ ʼಇʼ ಪೋಸ್ಟರ್‌ ರಚನೆ ಸ್ಪರ್ಧೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಯಿತು. ಈ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಲ್ಯಾವೆಂಡರ್‌ ಸಂಸ್ಥೆಯ ಅಧ್ಯಕ್ಷೆ ಹಾಗೂ ನೋಯಿಡಾ ನರ್ಸಿಂಗ್‌ ಕಾಲೇಜಿನ ನಿರ್ದೇಶಕಿ ಡಾ.ಲಾವಣ್ಯ ನಂದನ್‌ ಭಾಗವಹಿಸಿದ್ದು ದೆಹಲಿ ನರ್ಸಿಂಗ್‌ ಸ್ಕಾಲರ್‌ ಸಂಸ್ಥೆಯ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಂತಾ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಇ.ಗೋಪಿನಾಥ್‌, ಡಾ.ಡಯಾನ, ಆಯಿಷಾ, ಶಿಲ್ಪ ಹಾಗೂ ನರ್ಸಿಂಗ್‌ ಕಾಲೇಜಿನ ತರಬೇತಿ ವಿದ್ಯಾರ್ಥಿಗಳು ಇದ್ದರು.