ಸ್ತ್ರೀ ಕುಲ ರತ್ನ ಚನ್ನಮ್ಮ: ಶಾಸಕ ಮೇಟಿ

| Published : Oct 24 2024, 12:31 AM IST

ಸಾರಾಂಶ

ನವನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯತ್ಯುತ್ಸವದಲ್ಲಿ ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್ ಮೇಟಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾಮಾಜಿಕ ಕಟ್ಟಳೆಗೆ ಒಳಪಟ್ಟು ನಾಲ್ಕು ಗೋಡೆಗಳಲ್ಲಿಯೇ ಜೀವನ ಕಳೆಯುತ್ತಿರುವ ಮಹಿಳಾ ಕುಲಕ್ಕೆ ಚನ್ನಮ್ಮ ರತ್ನಳಾಗಿ ಪ್ರಜ್ವಲಿಸಿದ್ದಾಳೆ ಎಂದು ಶಾಸಕ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಾಯ್ ಮೇಟಿ ಹೇಳಿದರು.

ನವನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಉದ್ಘಾಟನಾ ಪರ ನುಡಿಗಳನ್ನಾಡಿದ ಅವರು, ಕೇವಲ ಅಡುಗೆ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಅಂದಿನ ಹೆಣ್ಣು ಮಕ್ಕಳು ಅನೇಕ ಶೋಷಣೆಗಳಿಗೆ ಒಳಗಾಗಿ ಸಮಾಜದ ದೃಷ್ಟಿಯಲ್ಲಿ ಅಬಲೆಯಾಗಿದ್ದಳು. ಆ ಸಮಯದಲ್ಲಿ ಕಾಕತಿ ದೂಳಪ್ಪ ದೇಸಾಯಿ ಪ್ರತಿಷ್ಠಿತ ಕುಟುಂಬದಲ್ಲಿ ಹುಟ್ಟಿದ ಚನ್ನಮ್ಮಳು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಕನ್ನಡದ ಮೊದಲ ಮಹಿಳೆಯಾಗಿದ್ದಾಳೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಜಮಖಂಡಿ ಡಾ.ಶಾರದಾ ಮಳ್ಳೂರ ಮಾತನಾಡಿ, ಒಂದು ಕುಟುಂಬಕ್ಕೆ ಒಬ್ಬ ಗಂಡುಮಗ ನಿರ್ವಹಿಸ ಬೇಕಾಗಿರುವದಕ್ಕಿಂತ ಹೆಚ್ಚಿನ ಸಾಹಸ ಮಾಡಿದ ವೀರ ಮಹಿಳೆ ಚನ್ನಮ್ಮ ಎಂದು ಬಣ್ಣಿಸಿದರು. ಚನ್ನಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿದ್ದರೂ, ಲಿಂಗ ಪೂಜೆ, ಯೋಗ, ಕುದುರೆ ಸವಾರಿ, ಯುದ್ದಕಲೆಗಳಲ್ಲಿ ಪರಿಣಿತಳಾಗಿದ್ದಳು. ಅಂಥ ವೀರ ವನಿತೆ ಆದರ್ಶ ಕಥೆಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳುವುದಲ್ಲದೇ ಕಿತ್ತೂರಲ್ಲಿರುವ ಸ್ಮಾರಕಗಳ ಬಗ್ಗೆ ಕಲ್ಪನೆ ನೀಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಸಿದ್ದ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಮಾತನಾಡಿ, ನಮ್ಮ ದೇಶದ ನೆಲದಲ್ಲಿ ಆಚಾರ ವಿಚಾರ ಯೋಗ ಧರ್ಮ ಹೇರಳವಾಗಿ ಇದ್ದರೂ ಇಂದಿನ ಯುವಜನತೆ ಅವುಗಳನ್ನು ಅನುಸರಿಸುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸ. ಇಂದಿನ ದುಸ್ಥಿತಿ ಏನೆಂದರೆ ಪಾಶ್ಚಾತರು ಭಾರತದ ಎಲ್ಲ ಕಾರ್ಯಗಳನ್ನು ಗೌರವಿಸುತ್ತಿದ್ದಾರೆ. ಆದರೆ ಇಲ್ಲಿಯ ಯುವ ಜನತೆ ಪಾಶ್ಚಾತರನ್ನು ಅನುಸರಿಸುತ್ತಿದ್ದಾರೆ ಎಂದರು.

ಇಂದಿನ ಯುವಕರು ಸ್ವಾತಂತ್ರ್ಯದ ಬಗ್ಗೆ ತಿಳಿಯುವದಿಲ್ಲ ಅದಕ್ಕಾಗಿ ಹೋರಾಡಿ ಹುತಾತ್ಮರಾದವರನ್ನು ಸ್ಮರಿಸುತ್ತಿಲ್ಲ. ಹೀಗಾಗಿ ಸ್ವಾತಂತ್ರ್ಯದ ಬಗ್ಗೆ ತಿಳುವಳಿಕೆ-ಬಳಸಿಕೊಳ್ಳುವ ಬಗೆ ಹೇಗೆ ಎಂಬುದು ಗೊತ್ತಾಗುತ್ತದೆ. ಯಾವುದೇ ಒಂದು ಸಣ್ಣ ವಿಮರ್ಶೆ ಗೊಂದಲ ಉಂಟುಮಾಡುತ್ತಿರುವುದು ವಿಷಾದನೀಯ. ಯುವಕರು ಚನ್ನಮ್ಮಳ ಸಾಹಸ ಮತ್ತು ಸ್ವಾತಂತ್ರದ ಮಹತ್ವ ತಿಳಿದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಮಾಜದ ಮುಖಂಡ ಹಾಗೂ ಕರ್ನಾಟಕ ರಕ್ಷಣಾ ಹೋರಾಟದ ಅಧ್ಯಕ್ಷ ಬಸವರಾಜ ದರ್ಮಂತಿ ಮಾತನಾಡಿ, ಮಹಾ ಮನೀಯರು ಮತ್ತು ಮಾತೆಯರ ಸಾಹಸ ರಾಷ್ಟ ಮಟ್ಟದಲ್ಲಿ ತಲುಪಿ ರಾಷ್ಟ್ರೀಯ ವ್ಯಕ್ತಿಗಳಾಗಬೇಕಾಗಿದೆ. ಆದರೆ ಇಂದು ಮಹಾ ನಾಯಕರ ಜಯಂತ್ಯುತ್ಸವಗಳು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸಿ ಅಂಥ ನಾಯಕರುಗಳಿಗೆ ಅಗೌರವ ನೀಡಿದಂತಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಶಾಸಕ ಎಚ್.ವಾಯ್ ಮೇಟಿ ಚನ್ನಮ್ಮ ಸಭಾಭವನಕ್ಕೆ ಹಣ ನೀಡುವುದಾಗಿ ಘೋಷಿಸಿದರು. ಸಮಾಜದ ಮುಖಂಡ ಎಸ್.ಎಮ್ ಸಿಂದೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ ಸ್ವಾಗತಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ರವಿ ಪಟ್ಟಣದ, ಸಗರಸಭೆ ಸದಸ್ಯ ಚನ್ನವೀರ ಅಂಗಡಿ, ನಿಂಗಪ್ಪ ದೊಡಮನಿ ಸೇರಿದಂತೆ ಇತರರು ಇದ್ದರು.

ಅಮೋಘ ಏಕಪಾತ್ರಾಭಿನಯ ಮಾಡಿದ ಎಡಿಸಿ:

ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚನ್ನಮ್ಮ ಹಾಗೂ ಬ್ರಿಟಿಷರ ಪರ ಬಂದ ಗೌಡ ಹಾಗೂ ಸಂಗೊಳ್ಳಿ ರಾಯಣ್ಣನ ನಡುವೆ ನಡೆದ ಸಂಭಾಷಣೆ ಏಕ ಪಾತ್ರಾಭಿನಯವನ್ನು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಅಮೋಘವಾಗಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು.