ಕನ್ನಡ ಅನುಷ್ಠಾನ ವಿಧೇಯಕ-2022 ರಡಿ ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನೇರ ಶಿಸ್ತು ಕ್ರಮ ಕೈಗೊಳ್ಳುವ ಶಕ್ತಿಯುತ ಅಧಿಕಾರ ಹೊಸ ಕಾನೂನಿನಲ್ಲಿದೆ. ಮುಂದಿನ ದಿನಗಳಲ್ಲಿ ಕಾಯ್ದೆಯು ಇನ್ನಷ್ಟು ಬಲಿಷ್ಠಗೊಳ್ಳುವ ಜೊತೆಗೆ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮವನ್ನೂ ವಿಧಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದ್ದಾರೆ.

- ಹೊಸ ಕಾನೂನಿನಲ್ಲಿ ಅಧಿಕಾರಿಗಳ ವಿರುದ್ಧ ನೇರ ಶಿಸ್ತು ಕ್ರಮದ ಶಕ್ತಿಯುತ ಅಧಿಕಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ - ದಾವಣಗೆರೆ ಜಿಲ್ಲಾಧಿಕಾರಿ ಕನ್ನಡಪ್ರೇಮ, ಇಲ್ಲಿನ ಕನ್ನಡಪರ ಕೆಲಸ ಸಿಎಂ ಗಮನಕ್ಕೂ ತರುತ್ತೇವೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಅನುಷ್ಠಾನ ವಿಧೇಯಕ-2022 ರಡಿ ಕನ್ನಡ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ನೇರ ಶಿಸ್ತು ಕ್ರಮ ಕೈಗೊಳ್ಳುವ ಶಕ್ತಿಯುತ ಅಧಿಕಾರ ಹೊಸ ಕಾನೂನಿನಲ್ಲಿದೆ. ಮುಂದಿನ ದಿನಗಳಲ್ಲಿ ಕಾಯ್ದೆಯು ಇನ್ನಷ್ಟು ಬಲಿಷ್ಠಗೊಳ್ಳುವ ಜೊತೆಗೆ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮವನ್ನೂ ವಿಧಿಸಲಾಗುವುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈಗಾಗಲೇ ಕನ್ನಡ ಅನುಷ್ಠಾನದಲ್ಲೇ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ್ದು, ವರ್ಗಾವಣೆ ಸಹ ಮಾಡಲಾಗಿದೆ ಎಂದರು.

ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಬದುಕಿನ ಭಾಗವಾಗಿದೆ. ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣ ಅನುಷ್ಠಾನಕ್ಕೆ ತರುವ ಮೂಲಕ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಬೇಕು. ಜಾಗತೀಕರಣದ ನಂತರ ಇಂಗ್ಲಿಷ್ ಕೇವಲ ಜಾಹೀರಾತಿನ ಭಾಷೆಯಾಗಿ ಬೆಳೆದಿದೆ. ಆದರೆ, ಕನ್ನಡವು ಕುವೆಂಪು, ಬಸವಣ್ಣ, ಪಂಪ, ಬೇಂದ್ರೆಯಂತಹ ಮಹಾನ್ ವ್ಯಕ್ತಿಗಳು ನೀಡಿದ ಸೃಜನಶೀಲ ಭಾಷೆಯಾಗಿದೆ. ಇಂತಹ ಭವ್ಯ ಪರಂಪರೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಫ್ರೆಂಚ್, ಜರ್ಮನ್ ಅಥವಾ ಹಿಂದಿ ಸೇರಿದಂತೆ ಯಾವುದೇ ಭಾಷೆ ಕಲಿಯುವುದಕ್ಕೂ ಅಭ್ಯಂತರವಿಲ್ಲ. ಆದರೆ, ನಮ್ಮ ನೆಲದಲ್ಲಿ ಕನ್ನಡವೇ ಸಾರ್ವಭೌಮವಾಗಿರಬೇಕು. ನಾವು ಎಲ್ಲಿಯೇ ಹೋದರೂ ಕನ್ನಡವನ್ನು ಉಳಿಸಿಕೊಳ್ಳಬೇಕು. ವಿದೇಶಿ ಹೂಡಿಕೆ ಅಥವಾ ಬೇರೆ ರಾಜ್ಯದವರೇ ಕರ್ನಾಟಕದಲ್ಲಿ ಕೈಗಾರಿಕೆ, ಉದ್ಯಮ ನಡೆಸುತ್ತಿದ್ದರೂ ಅಲ್ಲಿ ಕನ್ನಡದ ವಾತಾವರಣವೇ ಇರಬೇಕು. ರಸ್ತೆಗಳು, ಬಡಾವಣೆಗಳಿಗೆ ನಾಡಿನ ಸಾಹಿತಿಗಳು, ಗಣ್ಯರ ಹೆಸರಿಡುವ ಮೂಲಕ ಕನ್ನಡದ ಅಸ್ಮಿತೆ ಎತ್ತಿಹಿಡಿಯಬೇಕು ಎಂದು ತಿಳಿಸಿದರು.

ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಕನ್ನಡಪರ ಕಾಳಜಿ ಶ್ಲಾಘನೀಯ. ಜಿಲ್ಲೆಯಲ್ಲಿ ಆಗುತ್ತಿರುವ ಕನ್ನಡಪರ ಕೆಲಸಗಳನ್ನು ಮುಖ್ಯಮಂತ್ರಿ, ಇತರೆ ಜಿಲ್ಲೆಗಳ ಸಭೆಗಳಲ್ಲೂ ಉದಾಹರಣೆ ನೀಡಲಿದ್ದೇವೆ. ಜಿಲ್ಲಾಮಟ್ಟದ ಕೆಡಿಪಿ ಸಭೆಗಳಲ್ಲೂ ಕನ್ನಡ ಭಾಷಾ ಅನುಷ್ಠಾನ ಬಗ್ಗೆ ಗಂಭೀರ ಚರ್ಚೆಯಾಗಲಿ. ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು. ಪ್ರತಿಯೊಂದು ವಾಣಿಜ್ಯ ಮಳಿಗೆ ಮತ್ತು ಕೈಗಾರಿಕೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಭಾಗ ಕನ್ನಡ ಕಡ್ಡಾಯವಾಗಿ ಇರಲೇಬೇಕು ಎಂದು ಸೂಚಿಸಿದರು.

₹80 ಸಾವಿರ ದಂಡ ಮಾದರಿ ಕ್ರಮ:

ನಾಮಫಲಕಗಳಲ್ಲಿ ಶೇ.60:40ರಷ್ಟು ಕನ್ನಡ ಇರಬೇಕೆಂಬ ನಿಯಮ ದಾವಣಗೆರೆಯಲ್ಲಿ ಅತ್ಯುತ್ತಮವಾಗಿ ಜಾರಿಗೆ ತರಲಾಗಿದೆ. ಕಳೆದೊಂದು ವರ್ಷದಲ್ಲಿ ನಿಯಮ ಉಲ್ಲಂಘಿಸಿದವರಿಂದ ಸುಮಾರು ₹80 ಸಾವಿರ ದಂಡವನ್ನು ಪಾಲಿಕೆ ಸಂಗ್ರಹಿಸಿದೆ. ಇದು ರಾಜ್ಯಕ್ಕೆ ಮಾದರಿವಾಗಿದೆ. ವೈದ್ಯಕೀಯ ಚೀಟಿಯಲ್ಲಿ ವೈದ್ಯರು ರೋಗಿಗಳ ಹೆಸರನ್ನು ಕಡ್ಡಾಯವಾಗಿ ಕನ್ನಡದಲ್ಲಿ ಬರೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲೂ ಹಂತ ಹಂತವಾಗಿ ಕನ್ನಡ ಬಳಕೆ ಜಾರಿಗೆ ತರಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಪೋಸ್ಟ್‌ ಮಾರ್ಟಂ ವರದಿ ಕನ್ನಡದಲ್ಲಿ:

ಮರಣ ಪ್ರಮಾಣ ಪತ್ರ ಹಾಗೂ ಪೋಸ್ಟ್ ಮಾರ್ಟಂ ವರದಿಯೂ ಜನಸಾಮಾನ್ಯರಿಗೆ ಅರ್ಥವಾಗುವಂತೆ ಕನ್ನಡದಲ್ಲೇ ಇರಬೇಕು ಎಂಬ ಪ್ರಸ್ತಾವನೆ ಜಿಲ್ಲಾಧಿಕಾರಿ ಒಪ್ಪಿಕೊಂಡಿದ್ದು, ಇದನ್ನು ಜಾರಿಗೆ ತರುವಂತೆ ಸೂಚಿಸಿದ್ದೇವೆ. ಶಾಲೆಗಳಲ್ಲಿ ನಲಿ-ಕಲಿ ಕಲಿಕಾ ಪರಿಕಲ್ಪನೆ ಯಶಸ್ವಿಗೊಳಿಸಲು ಪರಿಶೀಲಿಸಲಾಗುವುದು. ಈ ಬಗ್ಗೆ ವರದಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲು ಕ್ರಮವಹಿಸಲಾಗಿದೆ. ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುತ್ತಿಲ್ಲ ಎಂಬ ದೂರು ಇದೆ. ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ ಎಂದು ಅಧ್ಯಕ್ಷರು ಸೂಚನೆ ನೀಡಿದರು.

180 ಮದರಸಾಗಳಲ್ಲಿ ಪ್ರಾಥಮಿಕ ಕನ್ನಡ ಕಲಿಕಾ ಕೇಂದ್ರ ಆರಂಭಿಸಿದ್ದು, ಮಾರ್ಚ್‌ ವೇಳೆಗೆ ಒಟ್ಟು 1,200 ಮದರಸಾಗಳಿಗೆ ಇದನ್ನು ವಿಸ್ತರಿಸುವ ಗುರಿ ಇದೆ. ಇದು ಉರ್ದು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಸುಲಭವಾಗಲಿದೆ. ರಾಜ್ಯದ 3900 ಶಾಲೆಗಳು ಶತಮಾನ ಕಂಡಿವೆ. ಅಂತಹ ಅನೇಕ ಶಾಲೆಗಳು ಇಂದು ಮುಚ್ಚುವ ಸ್ಥಿತಿಯಲ್ಲಿವೆ. ಹರಪನಹಳ್ಳಿ ಶಾಲೆಗೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದರು. ರಾಜ್ಯದ ಶಾಲೆಗಳ ಮೇಲೆ ಗಾಂಧಿ ಮತ್ತು ರವೀಂದ್ರನಾಥ್ ಠ್ಯಾಗೂರ್ ಪ್ರಭಾವವಿದೆ. ಇದು ಸಂತೋಷದ ವಿಷಯ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ 19700 ಶಾಲೆಗಳಿಗೆ ಹಕ್ಕುಪತ್ರ ನೀಡಲು ಸಹಕರಿಸಿದೆ. ಈಗ ಹೊಸದಾಗಿ ಕೆಪಿಎಸ್ ಶಾಲೆ ತೆರೆಯಲಾಗಿದ್ದು, ಪೋಷಕರು ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿಸಲು ಇಚ್ಛೆಪಡುತ್ತಾರೆ ಎಂದು ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೊತ್ತಮ ಬಿಳಿಮಲೆ ಹೇಳಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ಸದಸ್ಯರಾದ ಡಾ. ಎ.ಬಿ. ರಾಮಚಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸದಸ್ಯರು ಇದ್ದರು.

- - -

(ಕೋಟ್‌) ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು 2026-27ರ ಸಾಲಿನಲ್ಲಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಲು ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.

- ಡಾ.ಪುರುಷೋತ್ತಮ ಬಿಳಿಮಲೆ. ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ

- - -

-3ಕೆಡಿವಿಜಿ6, 7: ದಾವಣಗೆರೆ ಡಿಸಿ ಕಚೇರಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. -3ಕೆಡಿವಿಜಿ8: ಡಾ.ಪುರುಷೋತ್ತಮ ಬಿಳಿಮಲೆ.