ಗಣೇಶೋತ್ಸವದ ಹೆಸರಿನಲ್ಲಿ ನಿಯಮ ಉಲ್ಲಂಘಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ರಾತ್ರಿ 10ರ ಬಳಿಕ ಡಿಜೆ ಬಳಕೆಗೆ ಅವಕಾಶವಿಲ್ಲ. 80 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಾಡಿದ ಡಿಜೆ ವಾಹನ ಜಪ್ತಿ ಮಾಡುವ ಜತೆಗೆ ಸಂಬಂಧಿಸಿದ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು.
ಹುಬ್ಬಳ್ಳಿ:
ಗಣೇಶೋತ್ಸವದ ಹೆಸರಿನಲ್ಲಿ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಖಡಕ್ ಎಚ್ಚರಿಕೆ ನೀಡಿದರು. ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಕೆ, ಅಶ್ಲೀಲ ಹಾಗೂ ಪ್ರಚೋದನಕಾರಿ ಹಾಡುಗಳಿಗೆ ಅವಕಾಶವಿಲ್ಲ. ಮಿತಿಗಿಂತ ಹೆಚ್ಚಿನ ಶಬ್ದ ಮಾಡಿದರೆ ₹ 1 ಲಕ್ಷ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹು-ಧಾ ಪೊಲೀಸ್ ಕಮೀಷನರೇಟ್ ನೇತೃತ್ವದಲ್ಲಿ ಆಯೋಜಿಸಿದ್ದ ಗಣೇಶ ಹಬ್ಬದ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣೇಶೋತ್ಸವದ ಹೆಸರಿನಲ್ಲಿ ನಿಯಮ ಉಲ್ಲಂಘಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ರಾತ್ರಿ 10ರ ಬಳಿಕ ಡಿಜೆ ಬಳಕೆಗೆ ಅವಕಾಶವಿಲ್ಲ. 80 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಮಾಡಿದ ಡಿಜೆ ವಾಹನ ಜಪ್ತಿ ಮಾಡುವ ಜತೆಗೆ ಸಂಬಂಧಿಸಿದ ಗಣೇಶೋತ್ಸವ ಮಂಡಳಿಯ ಪದಾಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಸಾಂಪ್ರದಾಯಿಕ ವಾದ್ಯಮೇಳಗಳಿಗೆ ಮಾತ್ರ ರಾತ್ರಿ 12ರ ವರೆಗೆ ಅವಕಾಶವಿದೆ ಎಂದರು.ವಿಸರ್ಜನಾ ಮೆರವಣಿಗೆಯ ಟ್ರ್ಯಾಕ್ಟರ್‌ನಲ್ಲಿ ಪೊಲೀಸ್ ಸಿಬ್ಬಂದಿ ಇರಲಿದ್ದು, ಮೊಬೈಲ್ ಆ್ಯಪ್ ಮೂಲಕ ಶಬ್ದಮಟ್ಟ ಪರಿಶೀಲಿಸಲಾಗುವುದು. ಅಶ್ಲೀಲ ಹಾಗೂ ಪ್ರಚೋದನಕಾರಿ ಹಾಡುಗಳಿಗೆ ಕಡಿವಾಣ ಹಾಕಲಾಗುವುದು. ಮದ್ಯ, ಗಾಂಜಾ ಅಥವಾ ಇತರ ಮಾದಕ ವಸ್ತು ಸೇವಿಸಿ ಮೆರವಣಿಗೆಯಲ್ಲಿ ಕಾಣಿಸಿಕೊಂಡರೆ ಶೂನ್ಯ ಸಹಿಷ್ಣುತೆ ನೀತಿ ಅನ್ವಯವಾಗಲಿದೆ. ಆಲ್ಕೊ ಅನಲೈಸರ್, ನಾರ್ಕೋಟಿಕ್ಸ್ ಕಿಟ್ ಮೂಲಕ ತಪಾಸಣೆ ನಡೆಯಲಿದ್ದು, ಮಾರಕಾಸ್ತ್ರ ಪತ್ತೆಯಾದರೆ ರೌಡಿಶೀಟರ್ ತೆರೆಯುವ ಎಚ್ಚರಿಕೆ ನೀಡಿದರು.
ಮೆರವಣಿಗೆ ಸಾಗುವ ರಸ್ತೆ ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 400 ಸಿಸಿ ಕ್ಯಾಮೆರಾ ಅಳವಡಿಸುವಂತೆ ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಪೊಲೀಸ್ ಇಲಾಖೆಯ ಸುಮಾರು 200 ಕ್ಯಾಮೆರಾಗಳಲ್ಲಿ ದೋಷಪೂರಿತ ಕ್ಯಾಮೆರಾಗಳ ದುರಸ್ತಿಗೂ ಕ್ರಮಕೈಗೊಳ್ಳಲಾಗಿದೆ. ಸಂಚಾರ ದಟ್ಟಣೆ ತಪ್ಪಿಸಲು ಪಾರ್ಕಿಂಗ್ ಹಾಗೂ ಪರ‍್ಯಾಯ ಮಾರ್ಗಗಳ ಮಾಹಿತಿ ಒಳಗೊಂಡ ಆ್ಯಪ್ ರೂಪಿಸುವ ಚಿಂತನೆಯೂ ಇದೆ ಎಂದರು.ಧಾರವಾಡದ ವಿಜಯಾನಂದ ಸರಸ್ವತಿ ಶ್ರೀ ಮಾತನಾಡಿ, ಗಣೇಶೋತ್ಸವವು ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ವಿಶ್ವಾಸ ಬೆಳೆಸುವ ಹಬ್ಬವಾಗಬೇಕು. ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ವಿವಿಧ ಧರ್ಮಗಳ ಸಂಘ-ಸಂಸ್ಥೆಗಳ ಮುಖಂಡರನ್ನು ಗಣೇಶ ಮಂಡಳಿಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಒಟ್ಟಾಗಿ ಕಾರ್ಯಕ್ರಮ ನಡೆಸಬೇಕು. ಪೆಂಡಾಲ್‌ಗಳು ಸಂಸ್ಕೃತಿ ಕೇಂದ್ರಗಳಾಗಿ ಸ್ಥಳೀಯ ಕಲಾವಿದರು ಹಾಗೂ ಸಂಗೀತಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಮುಸ್ಲಿಂ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿ ಮಾತನಾಡಿ, ಗಣೇಶೋತ್ಸವ ಎಲ್ಲ ಧರ್ಮಗಳ ಜನರನ್ನು ಒಗ್ಗೂಡಿಸುವ ಸೌಹಾರ್ದದ ಹಬ್ಬವಾಗಬೇಕು. ಪ್ರೀತಿ, ಶಾಂತಿ ಹಾಗೂ ಸಹಬಾಳ್ವೆಗೆ ಆದ್ಯತೆ ನೀಡಬೇಕು ಎಂದರು.ಕ್ರೈಸ್ತ ಧರ್ಮಗುರು ಫಾದರ್ ಸುನೀಲಕುಮಾರ ಮಾತನಾಡಿ, ಇತರ ಧರ್ಮಗಳ ಆಚರಣೆಗಳಿಗೆ ಗೌರವ ನೀಡಿ, ಪರಿಸರ ಕಾಳಜಿಯೊಂದಿಗೆ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಮಾತನಾಡಿ, ಜಾತಿ- ಧರ್ಮದ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಹಬ್ಬ ಆಚರಿಸಬೇಕು. ಮಣ್ಣಿನ ಗಣೇಶ ಮೂರ್ತಿಗಳು ಹಾಗೂ ಹಸಿರು ಪಟಾಕಿ ಬಳಸಬೇಕು. ಮಹಾಪ್ರಸಾದದ ಸ್ಥಳಗಳಲ್ಲಿ ಹಸಿ-ಒಣ ಕಸ ಪ್ರತ್ಯೇಕಿಸುವಂತೆ ಮನವಿ ಮಾಡಿದರು.ಈ ವೇಳೆ ಗಣೇಶೋತ್ಸವ ಮಹಾಮಂಡಳಿಗಳ ಸದಸ್ಯರು ಮಾತನಾಡಿ, ಗಣೇಶ ಮೆರವಣಿಗೆಗೆ ರಸ್ತೆ ಗುಂಡಿಗಳಿಂದ ತೊಂದರೆಯಾಗದಂತೆ ತಕ್ಷಣ ದುರಸ್ತಿ ಮಾಡುವುದು. ವಿಸರ್ಜನಾ ಸ್ಥಳಗಳಲ್ಲಿ ನೀರಿನ ಟ್ಯಾಂಕರ್, ತಾತ್ಕಾಲಿಕ ಬಾವಿ, ಕ್ರೇನ್ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ವಿಪ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ದುರ್ಗಮ್ಮ ಬಿಜವಾಡ, ಪಾಲಿಕೆ ಸಭಾನಾಯಕ ಶಿವು ಮೆಣಸಿನಕಾಯಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮುಖಂಡರಾದ ಮಹೇಂದ್ರ ಸಿಂಘಿ, ಸತೀಶ ಮೇಹರವಾಡೆ, ಗುರುನಾಥ ಉಳ್ಳಿಕಾಶಿ, ಅಲ್ತಾಫಹುಸೇನ ಹಳ್ಳೂರ, ಅಲ್ತಾಫ ಕಿತ್ತೂರ ಸೇರಿದಂತೆ ಹಲವರು ಮಾತನಾಡಿದರು.ಡಿಸಿಪಿ ರವೀಶ ಸಿ.ಆರ್. ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ಮಾಜಿ ಸಂಸದ ಐ.ಜಿ. ಸನದಿ, ಉಪಮೇಯರ್ ರತ್ನಾಬಾಯಿ ನಾಝರೆ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಸೇರಿದಂತೆ ಗಣ್ಯರು, ವಿವಿಧ ಗಣೇಶ ಮಂಡಳಿಗಳ ಹಾಗೂ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಡಿಸಿಪಿ ಶ್ರುತಿ ಸ್ವಾಗತಿಸಿದರು.