ಧಾರವಾಡ:

ರಸಗೊಬ್ಬರದ ಸಗಟು ಹಾಗೂ ಚಿಲ್ಲರೆ ಮಾರಾಟಗಾರರು ತಮ್ಮ ಮಾರಾಟ ಕೇಂದ್ರದ ಎದುರು ಅಂದಿನ ರಸಗೊಬ್ಬರ ಮಾರಾಟ ದರ, ದಾಸ್ತಾನು ಕುರಿತು ಕಾಣುವಂತೆ ಫಲಕ ಹಾಕಬೇಕುವುದು ಕಡ್ಡಾಯವಾಗಿದೆ. ನಿಗದಿಗಿಂತ ಹೆಚ್ಚಿನ ದರ, ಅಕ್ರಮ ದಾಸ್ತಾನು ಹಾಗೂ ಕೃತಕ ಅಭಾವ ಸೃಷ್ಟಿಸಿದರೆ ಅಂತಹವರ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಎಚ್ಚರಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಬೀಜ ಮತ್ತು ರಸಗೊಬ್ಬರ, ಕೀಟನಾಶಕ ಔಷಧಿಗಳ ಮಾರಾಟಗಾರರ ಹಾಗೂ ಸಗಟು ಮತ್ತು ಚಿಲ್ಲರೆ ಮಾರಾಟಗಾರರ, ರಸಗೊಬ್ಬರ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

೫೪,೬೪೮ ಮೆಟ್ರಿಕ ಟನ್ ಬೇಡಿಕೆ:

೨೦೨೬-೨೭ನೇ ಸಾಲಿನ ಮುಂಗಾರು ಬೆಳೆಗಳಿಗೆ ವಿವಿಧ ವಿಧದ ಒಟ್ಟು ೫೪,೬೪೮ ಮೆಟ್ರಿಕ ಟನ್ ರಸಗೊಬ್ಬರ ಬೇಡಿಕೆ ಇದ್ದು, ಏಪ್ರಿಲ್‌ ವರೆಗೆ ೩,೫೯೩.೦೧ ಮೆಟ್ರಿಕ ಟನ್ ಮಾರಾಟವಾಗಿದೆ. ಮಾರಾಟ ಮಳಿಗೆಗಳಲ್ಲಿ ೯,೧೧೩.೫೩ ಮೆಟ್ರಿಕ ಟನ್ ಹಾಗೂ ಕೆಎಸ್‌ಎಸ್‌ಸಿಯಲ್ಲಿ ೨೧೩.೪೬ ಮತ್ತು ಕೆಎಸ್‌ಸಿಎಂಎಫ್‌ದಲ್ಲಿ ೬೩೩.೫೦ ಮೆಟ್ರಿಕ ಟನ್ ರಸಗೊಬ್ಬರ ದಾಸ್ತಾನಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಂಚಿಕೆ ಅನುಸಾರ ಉಳಿದ ರಸಗೊಬ್ಬರ ಸಕಾಲಕ್ಕೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.


ಮಾರಾಟಗಾರರ ವಿವರ ನೀಡಿ:

ರಸಗೊಬ್ಬರ ಉತ್ಪಾದನೆ ಹಾಗೂ ವಿತರಣಾ ಸಂಸ್ಥೆಗಳು ಕಡ್ಡಾಯವಾಗಿ ಸರಕು ಬರುವ ಮುಂಚಿತವಾಗಿ ಹಂಚಿಕೆ ಮಾಡುವ ಮಾರಾಟಗಾರರ ವಿವರವನ್ನು ಜಿಲ್ಲಾಡಳಿತಕ್ಕೆ ನೀಡಬೇಕು ಮತ್ತು ಸರಕು ಬರುವ ಮಾಹಿತಿಯನ್ನು ಕಡ್ಡಾಯವಾಗಿ ಕೆಎಸ್‌ಎಸ್‌ಸಿ ಹಾಗೂ ಕೆಎಸ್‌ಸಿಎಂಎಫ್ ಸಂಸ್ಥೆಗಳಿಗೆ ಮುಂಗಡವಾಗಿ ತಿಳಿಸಬೇಕು. ಜಿಲ್ಲೆಗೆ ಹಂಚಿಕೆಯಾಗುವ ಪ್ರಮಾಣದಲ್ಲಿ ಶೇ. ೨೫ರಷ್ಟು ಕಾಪು ದಾಸ್ತಾನು ಅಡಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಲಿಂಕ್ ಬೇಡ:

ಸಹಾಯಧನ ಆಧಾರಿತ ರಸಗೊಬ್ಬರಗಳ ಜತೆ ಬೇರೆ ಯಾವುದೇ ಲಿಂಕ್‌ ಮಾಡಿ ವಿತರಿಸಬಾರದು. ರೈತರಿಗೆ ಬೇಡಿಕೆ ಅನುಸಾರ ಅವರ ಎಫ್‌ಐಡಿಗೆ ದಾಖಲಿಸಿ ರಸಗೊಬ್ಬರ ನೀಡಬೇಕು ಎಂದ ಜಿಲ್ಲಾಧಿಕಾರಿ, ಯೂರಿಯಾ ರಸಗೊಬ್ಬರ ವರ್ಗಾವಣೆ ಮಾಡುವ ಅಪರಾಧಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೋಟಿಸ್:

ಏಪ್ರಿಲ್‌ ೨೦೨೫ರಿಂದ ಏಪ್ರಿಲ್‌ ೨೦೨೬ರೊಳಗೆ ಕೆಲವು ಚಿಲ್ಲರೆ ಮತ್ತು ಸಗಟು ರಸಗೊಬ್ಬರ ಮಾರಾಟಗಾರರು ತಮ್ಮ ಹಿಂದಿನ ವರ್ಷಗಳಿಗಿಂತ ಹೆಚ್ಚು ಯೂರಿಯಾ ಮತ್ತು ಡಿಎಸಿ ರಸಗೊಬ್ಬರ ಮಾರಾಟ ಮಾಡಿದ ಬಗ್ಗೆ ಪರಿಶೀಲಿಸಲಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ಏ. ೧೩ ಮತ್ತು ೧೪ರಂದು ಅತಿ ಹೆಚ್ಚು ಯೂರಿಯಾ ರಸಗೊಬ್ಬರ ಸಗಟು ಮಾರಾಟ ಮಾಡಿರುವ ಜಿಲ್ಲೆಯ ೧೦೩ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ೬೪ ಮಾರಾಟಗಾರರಿಗೆ ಮಾರಾಟ ನಿಲ್ಲಿಸಲು ಸೂಚಿಸಿದ್ದಾರೆ. ೩೨ ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು ನಿಯಮ ಉಲ್ಲಂಘಿಸಿದ ಐವರ ಲೈಸನ್ಸ್ ಅಮಾನತು ಮಾಡಲಾಗಿದೆ. ಅದೇ ರೀತಿ ಡಿಎಪಿ ರಸಗೊಬ್ಬರ ಮಾರಾಟ ಮಾಡಿದ ೯೫ ಮಾರಾಟಗಾರರ ಪೈಕಿ ೫೪ ಮಾರಾಟಗಾರರಿಗೆ ಮಾರಾಟ ನಿಲ್ಲಿಸಲು ಸೂಚಿಸಿದ್ದು ೩೧ ಜನರಿಗೆ ನೋಟಿಸ್ ನೀಡಲಾಗಿದೆ ಎಂದರು. ನಿಯಮ ಮೀರಿ ನಿಗದಿಗಿಂತ ಹೆಚ್ಚು ರಸಗೊಬ್ಬರ ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಒಟ್ಟಾರೆ ಶೇ. ೭೭ರಷ್ಟು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ದಾಖಲಾಗಿದ್ದು, ಒಟ್ಟು ೨,೪೪,೮೭೦ ರೈತರು ಪ್ರೂಟ್ಸ್ ಗುರಿತನ ಸಂಖ್ಯೆ ಹೊಂದಿದ್ದಾರೆಂದು ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ನಿರ್ದೇರ್ಶಕ ಸಂದೀಪ ಆರ್.ಜಿ., ಸಹಾಯಕ ಕೃಷಿ ಅಧಿಕಾರಿ ಪೂರ್ಣಿಮಾ ಮೇಘನ್ನವರ ಹಾಗೂ ಮಾರಾಟಗಾರರು ಇದ್ದರು.