ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ರೈತರಿಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರ ಸಾಮಾಗ್ರಿ ದಾಸ್ತಾನು ಮಾಡಲಾಗಿದ್ದು, ಕಾಳ ಸಂತೆಯಲ್ಲಿ ರಸಗೊಬ್ಬರ ಮಾಡಿದರೆ ಕಠಿಣ ಕ್ರಮ, ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.ಪಟ್ಟಣದ ರಸಗೊಬ್ಬರ ಮತ್ತು ಔಷಧಿ ದಾಸ್ತಾನು ಮಳಿಗೆಗಳಿಗೆ ಕಂದಾಯ ಇಲಾಖೆ, ಕೃಷಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳು ಭೇಟಿ ನೀಡಿ ಮಾತನಾಡಿದರು. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಬರಲಿದ್ದು ಸರ್ಕಾರದ ನಿರ್ದೇಶನ ಮತ್ತು ಜಿಲ್ಲಾಧಿಕಾರಿಗಳ ಆದೇಶದಂತೆ ರೈತರ ಬಿತ್ತನೆ ಹಿನ್ನಲೆಯಲ್ಲಿ ಕೊರಟಗೆರೆ ತಾಲೂಕಿನಲ್ಲಿ ರೈತರಿಗೆ ತೊಂದರೆ ಆಗದಂತೆ ರಸಗೊಬ್ಬರ, ಬಿತ್ತನೆ ಬೀಜ ಮತ್ತು ಇತರ ಕೃಷಿ ಸಾಮಗ್ರಿ ಅಗತ್ಯತೆಗೆ ಗೊಬ್ಬರ ಅಂಗಡಿಗಳಲ್ಲಿ ದಾಸ್ತಾನುಗಳನ್ನು ಪರಿಶೀಲಿಸಲಾಗುತ್ತಿದೆ. ತಾಲೂಕಿನಲ್ಲಿ ರಸಗೊಬ್ಬರ ದಾಸ್ತಾನು ಇದ್ದು ರೈತರು ಕೃಷಿಗೆ ಚಟುವಟಿಕೆಗೆ ಯಾವುದೇ ಅತಂಕ ಪಡುವಂತ್ತಿಲ್ಲ, ತಮ್ಮ ಎಫ್.ಪಿ.ಡಿ ಐಡಿ ನೀಡಿ ಗೊಬ್ಬರ ಬೀಜ ಪಡೆಯಬೇಕು ಎಂದರು.
ಕೊರಟಗೆರೆ ತಾಲೂಕಿನಲ್ಲಿ ರೈತರು ಹೆಚ್ಚಾಗಿ ರಾಗಿ, ಶೇಂಗಾ, ಜೋಳದ ಬೆಳೆಗೆ ಒತ್ತು ನೀಡಲಿದ್ದು, ರೈತರಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜವನ್ನು ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆ ವತಿಯಿಂದ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳಲಿದೆ. ಒಂದು ವೇಳೆ ರಸಗೊಬ್ಬರದ ಬೇಡಿಕೆ ಹೆಚ್ಚಿದರೆ ನೆರೆಯ ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳಿಂದ ಗೊಬ್ಬರವನ್ನು ತರಿಸಲಾಗುವುದು. ರಸಗೊಬ್ಬರ, ಬೀಜ, ಇತರ ಕೃಷಿ ಪರಿಕರಗಳನ್ನು ಅಂಗಡಿಯವರು ನಿಖರ ಬೆಲೆಗಿಂತ ಹೆಚ್ಚಿಗೆ ದರಕ್ಕೆ ಮಾರಾಟ ಮಾಡಿದರೆ ಮತ್ತು ಕಾಳ ಸಂತೆಯಲ್ಲಿ ಮಾರಲು ಪ್ರಯತ್ನಿಸಿದರೆ ಅಂತಹವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪರಿಶೀಲನೆ ಸಂದರ್ಭದಲ್ಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ ರುದ್ರಪ್ಪ, ಪುರಸಭಾ ಮುಖ್ಯಾಧಿಕಾರಿ ಉಮೇಶ್, ಆರ್.ಐ.ಬಸವರಾಜು, ವೇಣು ಸೇರಿದಂತೆ ಹಲವರು ಹಾಜರಿದ್ದರು.