ಸಾರಾಂಶ
ರಾಮನಗರ: ಸಾಲ ವಸೂಲಾತಿ ಸಂದರ್ಭಗಳಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ಕ್ರಮಗಳಿಂದ ಆಗುತ್ತಿರುವ ಅನಾಹುತ, ದುರ್ಘಟನೆ ನಿಯಂತ್ರಿಸಲು ಜಾರಿಗೊಂಡಿರುವ ಮೈಕ್ರೋ ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ-2025 ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ಉಲ್ಲಂಘಿಸಿದಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಸಂಸ್ಥೆಗಳು ಅಥವಾ ಲೇವಾದೇವಿದಾರರು ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲ ಗುಂಪು ಮತ್ತು ವ್ಯಕ್ತಿಗಳು ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಈ ಆಧ್ಯಾದೇಶ ಜಾರಿಗೊಳಿಸಲಾಗಿದೆ ಎಂದರು.ಕರ್ನಾಟಕ ಕಿರು (ಮೈಕ್ರೋಸಾಲ) ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025ರಡಿ ಆರ್‌ಬಿಐಯಡಿ ನೋಂದಣಿಯ ಹಣಕಾಸು ಸಂಸ್ಥೆಗಳು ಬರುವುದಿಲ್ಲ. ನೋಂದಣಿಯಾಗಿರುವ ಸಂಸ್ಥೆಗಳು ಸಾಲ ವಸೂಲಾತಿಯನ್ನು ಆರ್‌ಬಿಐನ ನಿಯಮಗಳನ್ವಯವಷ್ಟೇ ವಸೂಲಿ ಮಾಡಬೇಕು, ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ದೂರು ದಾಖಲಿಸಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಕಂಪನಿಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿದಾರರು ಕಡ್ಡಾಯವಾಗಿ 30 ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಗೆ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗುವುದು ಹಾಗೂ ಅರ್ಜಿ ನೀಡಲಾಗುವುದು. ಸಾಲಗಾರರ ಹೆಸರು, ವಿಳಾಸ, ಅವರಿಗೆ ನೀಡಲಾದ ಅಸಲು, ಈಗಾಗಲೇ ವಸೂಲಿ ಮಾಡಲಾದ ಮೊತ್ತ, ಬಾಕಿ ಮೊತ್ತ, ನೂತನ ಆಧ್ಯಾದೇಶದ ಅನುಸಾರ ಕಾರ್ಯನಿರ್ವಹಿಸತಕ್ಕದ್ದೆಂಬ ಲಿಖಿತ ಮುಚ್ಚಳಿಕೆ ಸೇರಿದಂತೆ ಅಗತ್ಯ ಮಾಹಿತಿ ಪಡೆಯಲಾಗುವುದು ಎಂದರು.ಸಾಲ ನೀಡುವಾಗ ಸಾಲ ಹಿಂತಿರುಗಿಸುವವರ ಶಕ್ತಾನುಸಾರ ಕ್ರಮ ವಹಿಸಬೇಕು. ಲೋನ್ ಕಾರ್ಡುಗಳನ್ನು ಸೂಕ್ತವಾಗಿ ನಿರ್ವಹಿಸಬೇಕು, ಸಾಲ ವಸೂಲಾತಿ ಏಜೆನ್ಸಿಯವರ ಹಿನ್ನೆಲೆ ತಿಳಿಸಬೇಕು, ಎಲ್ಲಾ ರಿಕವರಿ ಏಜೆನ್ಸಿಗಳ ಬಗ್ಗೆ ಮಾಹಿತಿ ನೀಡಬೇಕು, ಸಾಲ ವಸೂಲಾತಿಯಲ್ಲಿ ಸಮಾಜ ಘಾತುಕ ಶಕ್ತಿಗಳನ್ನು ಬಳಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು, ಸಾಲ ವಸೂಲಾತಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಬಾರದು. ಸಾಲ ವಸೂಲಾತಿಯಲ್ಲಿ ಕಠಿಣ ಕ್ರಮ ಅನುಸರಿಸಿದರೆ ಹೊಸ ಆಧ್ಯಾದೇಶದ ಪ್ರಕಾರ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ ಎಂದು ಯಶವಂತ್ ಎಚ್ಚರಿಸಿದರು.
ಎಸ್ಪಿ ಶ್ರೀನಿವಾಸಗೌಡ ಮಾತನಾಡಿ, ಸಾಲ ವಸೂಲಾತಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಹಾಗೂ ಲೇವಾದೇವಿದಾರರು ಬಲವಂತದ ಕ್ರಮದಲ್ಲಿ ತೊಡಗಬಾರದು, ಸಂಜೆ 6 ಗಂಟೆಯ ನಂತರ ಮನೆ ಹತ್ತಿರ ಹೋಗಿ ಕಿರುಕುಳ ನೀಡಬಾರದು. ಅಂತಹವರ ವಿರುದ್ಧ ದೂರು ದಾಖಲಿಸಲಾಗುವುದು. ನೀಡಿರುವ ಸಾಲ ವಸೂಲಿ ಮಾಡಿ, ಆದರೆ ಸಾಲ ವಸೂಲಾತಿಗೆ ಇರುವ ಕ್ರಮಗಳನ್ನಷ್ಟೇ ಬಳಸಬೇಕು, ಸಂಬಂಧಿಸಿದವರ ಮನೆಗೆ ಹೋಗಿ ಬೈಕ್ ತರುವುದು, ಎಮ್ಮೆ, ಹಸುಗಳನ್ನು ತರುವುದು, ಸಾಲ ಪಡೆದವರ ಭಾವಚಿತ್ರ ದುರ್ಬಳಕೆ ಮಾಡುವುದು, ಮೊಬೈಲ್‌ನಲ್ಲಿ ಅಶ್ಲೀಲವಾಗಿ ಮಾತನಾಡುವಂತಹ ಕೃತ್ಯಗಳನ್ನು ಎಸಗಬಾರದು ಎಂದು ಹೇಳಿದರು.ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಕವಿತಾ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭು, ಎಂ.ಎಫ್.ಐನ ರಾಜ್ಯ ಪ್ರತಿನಿಧಿ ಲೋಕೇಶ್, ತಹಸೀಲ್ದಾರರು, ಮೈಕ್ರೋಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು, ಲೇವಾದೇವಿದಾರರು ಉಪಸ್ಥಿತರಿದ್ದರು.
18ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.