ಸಾರಾಂಶ
ಸರ್ಕಾರದ ನಿಯಮಾವಳಿ ಪ್ರಕಾರ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಿರೇಕೆರೂರು ತಾಲೂಕು ಘಟಕದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರು: ಸರ್ಕಾರದ ನಿಯಮಾವಳಿ ಪ್ರಕಾರ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಹಿರೇಕೆರೂರು ತಾಲೂಕು ಘಟಕದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಹಾವೇರಿ ಜಿಲ್ಲಾ ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರ, ಕಾರ್ಯಕರ್ತರ ಛಲ ಬಿಡದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ. ರಾಜ್ಯಪಾಲರ ಸಹಿ ಆಗಿ ಕಾನೂನಾಗಿ ಕೂಡಾ ಜಾರಿಯಾಗಿದೆ. ಈ ಕಾನೂನು ಪರಿಪೂರ್ಣವಾಗಿ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಕರ್ನಾಟಕ ಸರ್ಕಾರ ಈಗ ಜಾರಿಗೆ ತಂದಿರುವ ಕನ್ನಡ ಭಾಷಾ ಸಮಗ್ರ ವಿಧೇಯಕದ ಪ್ರಕಾರ ಎಲ್ಲ ಅಂಗಡಿ ಮುಂಗಟ್ಟುಗಳ ಮೇಲೂ ಕನ್ನಡದ ನಾಮಫಲಕವೇ ಶೇ. ೬೦ರಷ್ಟು ಭಾಗ ಇರಬೇಕು. ಕನ್ನಡವೇ ಮೊದಲ ಸ್ಥಾನದಲ್ಲಿರಬೇಕು. ಜಾಹೀರಾತು ಫಲಕಗಳು ಕೂಡಾ ಕನ್ನಡದಲ್ಲಿಯೇ ಇರಬೇಕು. ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಕಟ್ಟುನಿಟ್ಟಾಗಿ ಇದನ್ನು ಪಾಲಿಸಲೇಬೇಕು. ಕನ್ನಡಿಗರ ಜಾಗೃತಿ ಸಲುವಾಗಿ ಈ ಹೋರಾಟವನ್ನು ನಡೆಸುತ್ತಿದ್ದು, ನಮ್ಮ ತಾಲೂಕಿನ ಪ್ರತಿಯೊಬ್ಬ ಉದ್ಯಮಿ, ವ್ಯಾಪಾರಸ್ಥ ಸರ್ಕಾರದ ನಿಯಮಾವಳಿ ಪ್ರಕಾರ ತಮ್ಮ ತಮ್ಮ ಅಂಗಡಿಯ ಮುಂದಿನ ಅನ್ಯಭಾಷಾ ಫಲಕಗಳನ್ನು ತೆರವುಗೊಳಿಸಿ ಕನ್ನಡದಲ್ಲಿಯೇ ನಾಮಫಲಕಗಳನ್ನು ಬರೆಸುವಂತೆ ಕಟ್ಟಿನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ನಮ್ಮ ವೇದಿಕೆಯವರು ಖುದ್ದಾಗಿ ಬೀದಿಗಿಳಿದು, ಅನ್ಯಭಾಷಾ ನಾಮಫಲಕಗಳನ್ನು ತೆರವುಗೊಳಿಸಲು ಮುಂದಾಗುತ್ತೇವೆ ಎಂದು ಎಚ್ಚರಿಸಿದರು.ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಕಾರ್ಯದರ್ಶಿ ಕರಿಬಸಯ್ಯ ಬಸರಳ್ಳಿಮಠ, ಜೈಕುಮಾರ ಉಪಾರ, ಅನಂದ ಬಂಡಿವಡ್ಡರ, ಸತ್ಯವತಿ ಕಡವಿ, ಟಿಪ್ಪುಸುಲ್ತಾನ್ ಮಕಾಂದಾರ, ಕರಿಯಪ್ಪ ಕೋರವರ, ಶಿವಾನಂದ ಪೂಜಾರ, ಸಬ್ಬು ಕೋಡಮಗ್ಗಿ, ಮಂಜು ರಾಯ್ಕರ್, ಗಣೇಶ ಚಿಕಮತ್ತೂರು, ರಫೀಕ್ ತಾವರಗಿ, ಜಬಿಉಲಾ ಹಿರೇಕೆರೂರು, ಕಲ್ಲೇಶ್ ಸುಣಗಾರ, ಕಾಂತೇಶ್ ಯಡಗೋಡಿ ಇದ್ದರು.