ಬ್ಯಾಡಗಿ: ಪಟ್ಟಣದಲ್ಲಿ ಗೋಮಾಂಸ ಮಾರಾಟ ಹಾಗೂ ಅಕ್ರಮ ಸಾಗಾಣಿಕೆಗೆ ಕಡಿವಾಣ ಹಾಕಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಗೋವಂಶ ಸಂರಕ್ಷಣೆ ಮತ್ತು ಕಸಾಯಿಖಾನೆ ನಿಷೇಧ ಕಾಯ್ದೆ-2020” ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಜಿಲ್ಲಾ ಸಂಯೋಜಕ ಹರೀಶ ಹಾನಗಲ್, ರಾಜ್ಯದಲ್ಲಿ ಜಾರಿಯಲ್ಲಿರುವ ಗೋವಂಶ ಸಂರಕ್ಷಣೆ ಕಾಯ್ದೆ ಕೇವಲ ಕಾಗದದಲ್ಲೇ ಉಳಿದಂತಾಗಿದೆ. ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕಸಾಯಿಖಾನೆಗಳಲ್ಲಿ ಪ್ರತಿದಿನ ನೂರಾರು ಗೋವುಗಳ ಹತ್ಯೆ ನಡೆಯುತ್ತಿದ್ದು, ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದರು. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.17 ಕಸಾಯಿಖಾನೆಗಳು: ರವಿ ಲಮಾಣಿ ಮಾತನಾಡಿ, ಬ್ಯಾಡಗಿ ಪಟ್ಟಣದಲ್ಲಿ 17ಕ್ಕೂ ಹೆಚ್ಚು ಸ್ಥಳಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಗೋಮಾಂಸ ಮಾರಾಟ ಹಾಗೂ ಗೋಹತ್ಯೆ ನಡೆಯುತ್ತಿದೆ. ಪ್ರಮುಖ ರಸ್ತೆಗಳಿಗೆ ಹೊಂದಿಕೊಂಡ ಮನೆಗಳು ಹಾಗೂ ಅಂಗಡಿಗಳಲ್ಲೇ ಇಂತಹ ಚಟುವಟಿಕೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದಲೇ ಈ ಅಕ್ರಮ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಕೂಡಲೇ ವಿಶೇಷ ದಾಳಿ ನಡೆಸಿ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ತಪಾಸಣೆ ಕೇಂದ್ರ ತೆರೆಯಿರಿ: ಗೋವುಗಳ ಅಕ್ರಮ ಸಾಗಾಣಿಕೆ ತಡೆಯಲು ಪಟ್ಟಣದ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು, ರಾತ್ರಿ ವೇಳೆ ವಿಶೇಷ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಬೇಕು ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹಿಂದೂ ಜಾಗರಣ ವೇದಿಕೆ ಪದಾಧಿಕಾರಿಗಳಾದ ವಿನಾಯಕ ಕಂಬಳಿ, ಮಾರುತಿ ಭಜಂತ್ರಿ, ವೀರೇಶ, ಸಂಜೀವ ಮಡಿವಾಳರ, ಸುಭಾಷ ಮಾಳಗಿ, ಸಚಿನ್ ಅರುಣಕುಮಾರ, ಮುಖೇಶ್, ಅರುಣ, ಪ್ರೇಮ್, ರಾಕೇಶ್ ಉಪಸ್ಥಿತರಿದ್ದರು.