ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ

| Published : Mar 26 2024, 01:05 AM IST

ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚಿನ ಮೊತ್ತದ ಹಣವನ್ನು ತೆಗೆದುಕೊಂಡು ಹೋದಲ್ಲಿ ಅದಕ್ಕೆ ಸೂಕ್ತವಾದ ದಾಖಲೆ ಹಾಜರುಪಡಿಸಬೇಕು. ತಪ್ಪಿದ್ದಲ್ಲಿ ಹಣವನ್ನು ಜಪ್ತಿ ಮಾಡಲಾಗುವುದು ಹಾಗೂ ಕೇಸ್ ದಾಖಲಿಸಿ ಸಮಿತಿ ಮುಂದೆ ಹಾಜರುಪಡಿಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ಲೋಕಸಭಾ ಸಾರ್ವತ್ರಿಕ ಚುನಾವಣೆಗಳು-೨೦೨೪ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ತಾಲೂಕುಗಳಲ್ಲಿ ೨೮ ಚೆಕ್ ಪೋಸ್ಟ್‌ಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮತ್ತು ಚಿಂತಾಮಣಿ ತಾಲೂಕುಗಳಲ್ಲಿ ೮ ಚೆಕ್ ಪೋಸ್ಟ್‌ಗಳು ಸೇರಿ ಒಟ್ಟು ೩೬ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಚುನಾವಣಾಧಿಕಾರಿ ಅಕ್ರಂಪಾಷ ತಿಳಿಸಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲೆಯ ಸಾರ್ವಜನಿಕರು, ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು ಇತರೆ ಸಂಬಂಧಿತ ವ್ಯಕ್ತಿಗಳು ಅನುಸರಿಸಬೇಕಾದ ಕ್ರಮಗಳ ಸಭೆಯಲ್ಲಿ ಅವರು ಮಾತನಾಡಿದರು.

ನೀತಿಸಂಹಿತಿ ಪಾಲನೆ ಕಡ್ಡಾಯ

ಅಂತಾರಾಜ್ಯ ಗಡಿ ಭಾಗಗಳಲ್ಲಿ ಎಫ್‌ಎಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆಯ ನೀತಿ ನಿಬಂಧನೆಗಳನ್ನು ನಾವೆಲ್ಲರೂ ಕಡ್ಡಾಯವಾಗಿ ತಿಳಿಯಬೇಕು, ಚುನಾವಣೆ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಸಂವಿಧಾನ, ಪ್ರಜಾಪ್ರತಿನಿಧಿ ಕಾಯ್ದೆ-೧೯೫೧ರ ಕಾಯ್ದೆ, ಭಾರತೀಯ ದಂಡ ಸಂಹಿತೆ ಕಾಯ್ದೆಯಡಿ ಕರ್ತವ್ಯ ನಿರ್ವಹಿಸಬೇಕು ಎಂದರು.

೫೦,೦೦೦ ರು.ಗಿಂತ ಹೆಚ್ಚಿನ ಮೊತ್ತದ ಹಣವನ್ನು ತೆಗೆದುಕೊಂಡು ಹೋದಲ್ಲಿ ಅದಕ್ಕೆ ಸೂಕ್ತವಾದ ದಾಖಲೆ ಹಾಜರುಪಡಿಸಬೇಕು. ತಪ್ಪಿದ್ದಲ್ಲಿ ಹಣವನ್ನು ಜಪ್ತಿ ಮಾಡಲಾಗುವುದು ಹಾಗೂ ಕೇಸ್ ದಾಖಲಿಸಿ ಸಮಿತಿ ಮುಂದೆ ಹಾಜರುಪಡಿಸಲಾಗುವುದು. ಪ್ರತಿದಿನದ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲನೆಗೆ ಒಳಪಡಿಸಿ ಅನುಮಾನಾಸ್ಪದ ವಹಿವಾಟುಗಳಿದ್ದಲ್ಲಿ ಸಂಬಂಧಪಟ್ಟ ಖಾತೆದಾರರಿಗೆ ನೋಟಿಸ್ ನೀಡಲಾಗುವುದು. ೧೦ ಲಕ್ಷ ರು. ಮೀರಿದ ವಹಿವಾಟುಗಳಿದ್ದಲ್ಲಿ ಆದಾಯ ತೆರಿಗೆಯ ಇಲಾಖಾ ಅಧಿಕಾರಿಗಳ ಪರಿಶೀಲನೆಗೆ ಒಳಪಡಿಸಲಾಗುವುದು ಎಂದರು.

ಚೆಕ್‌ಪೋಸ್ಟ್‌ನಲ್ಲಿ ಬಿಗಿ ತಪಾಸಣೆ

ಯಾವುದೇ ಅಗತ್ಯ ದಾಖಲೆಗಳಿಲ್ಲದ ೧೦ ಲಕ್ಷ ರು. ಮೀರಿದ ನಗದು ಮತ್ತು ಒಂದು ಕೆ.ಜಿ ಮೀರಿದ ಚಿನ್ನದ ಆಭರಣಗಳನ್ನು ಜಪ್ತಿ ಮಾಡಲಾಗುವುದು. ಆದುದರಿಂದ ಆಭರಣ ಮಾರಾಟಗಾರರು ಖರೀದಿ ಮತ್ತು ಮಾರಾಟ ವಹಿ ನಿರ್ವಹಿಸಬೇಕು. ಯಾವುದೇ ರಾಜಕೀಯ ಚಿಹ್ನೆ, ವ್ಯಕ್ತಿಗಳ ಭಾವಚಿತ್ರಗಳುಳ್ಳ ವಸ್ತುಗಳ ಹಂಚುವಿಕೆ ನಿಷೇಧಿಸಿದೆ. ಕೋಲಾರ ಲೋಕಸಭೆ ಚುನಾವಣಾ ವೆಚ್ಚದ ಮಿತಿ ೯೫,೦೦,೦೦೦ ರೂ. ಇದೆ. ಎಲ್ಲಾ ಚೆಕ್‌ಪೋಸ್ಟ್‌ಗಳು ಸಿ.ಸಿ ಟಿ.ವಿ ಕಣ್ಣಾವಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಜೂನ್‌ 6ರ ವರೆಗೆ ನೀತಿ ಸಂಹಿತೆ

ಜಿಪಂ ಸಿಇಓ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಪದ್ಮ ಬಸವಂತಪ್ಪ ಮಾತನಾಡಿ, ಲೋಕಸಭಾ ಸಾರ್ವತ್ರಿಕ ಚುನಾವಣೆಗಳು-೨೦೨೪ಕ್ಕೆ ಸಂಬಂಧಿಸಿದಂತೆ ಮಾ.೧೬ ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ ಹಾಗಾಗಿ ಚುನಾವಣಾ ಮಾರ್ಗಸೂಚಿಗಳ ಅನುಸಾರ ಕಾರ್ಯನಿರ್ವಹಿಸಬೇಕಾಗಿದೆ. ಏ.೨೬ ರಂದು ಮತದಾನ ನಡೆಯುತ್ತದೆ ಹಾಗೂ ಜೂ.೪ ರಂದು ಫಲಿತಾಂಶ ಹೊರಬೀಳಲಿದ್ದು ಜೂ.೬ ವರೆಗೂ ಯಾರೂ ಸಹ ನಿಯಮಗಳ ಉಲ್ಲಂಘನೆ ಮಾಡಬಾರದು ಎಂದರು.