ಸಾರಾಂಶ
ರಾಜ್ಯದ 13 ಮಹಾನಗರಪಾಲಿಕೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗದಿರುವುದರಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಮುಂದುವರೆದಿದೆ
ಶಿವಮೊಗ್ಗ: ರಾಜ್ಯದ 13 ಮಹಾನಗರಪಾಲಿಕೆ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗದಿರುವುದರಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಮುಂದುವರೆದಿದೆ
ಸರ್ಕಾರಿ ನೌಕರರಿಗೆ ಸಮಾನವಾಗಿ , 7ನೇ ವೇತನ ಆಯೋಗ ಶಿಫಾರಸ್ಸು ಅನ್ವಯಿಸಬೇಕು, ಕೆಜಿಐಡಿ, ಮುಂಬಡ್ತಿ, ಆರೋಗ್ಯ ಸೌಲಭ್ಯಗಳ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ವ್ಯಾಪಿ ಮಹಾನಗರ ಪಾಲಿಕೆ ನೌಕರರು ಮಂಗಳವಾರದಿಂದ ಮುಷ್ಕರ ಆರಂಭಿಸಿದ್ದಾರೆ.ಸಂಘದ ಪದಾಧಿಕಾರಿಗಳೊಂದಿಗೆ ಸರ್ಕಾರ ಯಾವುದೇ ಮಾತುಕತೆಗೆ ಮುಂದಾಗದಿರುವ ಸರ್ಕಾರದ ಧೋರಣೆಯನ್ನು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘವು ತೀವ್ರವಾಗಿ ಖಂಡಿಸಿದೆ. ಇಂದು ಕೂಡ ಇಲ್ಲಿನ ಮಹಾನಗರ ಪಾಲಿಕೆ ಆವರಣದಲ್ಲಿ ನೌಕರರ ಮುಷ್ಕರ ಮುಂದುವರೆದಿದ್ದು, ನಗರದಲ್ಲಿ ಸ್ವಚ್ಚತೆ ಮತ್ತು ವಿವಿಧ ವಿಭಾಗಗಳ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ.
ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಮುಷ್ಕರ ಮುಂದುವರೆಯಲಿದೆ. ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಹೊರತು ಮುಷ್ಕರ ಹಿಂಪಡೆಯದಿರಲು ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಪರಿಷತ್ ನಿರ್ಧರಿಸಿದೆ. ಅದರಂತೆ ಶಿವಮೊಗ್ಗ ದಲ್ಲೂ ಪಾಲಿಕೆ ನೌಕರರ ಮುಷ್ಕರ ಮುಂದುವರೆಯಲಿದೆ . ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೆ ನೌಕರರ ಬದುಕಿನ ಪ್ರಶ್ನೆಯೂ ಇರುವುದರಿಂದ ಸಾರ್ವಜನಿಕರು ಮುಷ್ಕರವನ್ನು ಬೆಂಬಲಿಸಬೇಕು. ಜನಪ್ರತಿನಿಧಿಗಳು , ಸರ್ಕಾರ ನೌಕರರ ಮತ್ತು ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎನ್. ಗೋವಿಂದ್ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಮೋಹನ್, ಪಿ.ಕುಮಾರ್, ಮಂಜಣ್ಣ, ವಸಂತಕುಮಾರ್, ಮಾರುತಿ, ಪೆಂಚಲಯ್ಯ ಮತ್ತಿತರರಿದ್ದರು.