ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಸಾಧನೆಗೆ ಪ್ರಯತ್ನ

| Published : Jul 22 2024, 01:19 AM IST

ಸಾರಾಂಶ

ಅವಳಿ ತಾಲೂಕುಗಳಲ್ಲಿ ಇರುವಂತಹ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಶಾಸಕರು ಹಾಗೂ ಶಿಕ್ಷಕರ ಸಲಹೆ ಸಹಕಾರದ ಮೇರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುವುದಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಅವಳಿ ತಾಲೂಕುಗಳಲ್ಲಿ ಇರುವಂತಹ ಶೈಕ್ಷಣಿಕ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ, ಶಾಸಕರು ಹಾಗೂ ಶಿಕ್ಷಕರ ಸಲಹೆ ಸಹಕಾರದ ಮೇರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸುವುದಾಗಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ಹೇಳಿದರು.

ಶನಿವಾರ ಸಂಜೆ ಹೊನ್ನಾಳಿ ತಾಲೂಕು ಕನಕ ನೌಕರರ ಸಂಘ ವತಿಯಿಂದ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರರಾಗಿದ್ದ ಬಸವರಾಜ ರಾಯರೆಡ್ಡಿ ಅವರ ಕ್ಷೇತ್ರ ಯಲಬುರ್ಗಾದಲ್ಲಿ ಉತ್ತಮ ಸೇವೆ ಸಲ್ಲಿಸಿ, ಅವರಿಂದ ಅನುಮತಿ ಪಡೆದು ಹೊನ್ನಾಳಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಅದೇ ರೀತಿ ಇಲ್ಲಿಯ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಜನಪ್ರತಿನಿಧಿಗಳು ಹಾಗೂ ಎಲ್ಲ ಶಿಕ್ಷಕರ ಸಹಕಾರ ಪಡೆದು ಸೇವೆ ಸಲ್ಲಿಸುವ ಭರವಸೆ ನೀಡುತ್ತೇನೆ ಎಂದು ಹೇಳಿದರು.

ತಾಲೂಕಿನಲ್ಲಿ ಕನಕ ನೌಕರರ ಸಂಘ ಸಮಾಜದ ಬಂಧುಗಳನ್ನು ಗುರುತಿಸಿ ಸಹಕಾರ- ಪ್ರೋತ್ಸಾಹ ಕೊಡುತ್ತಿರುವುದು ಶ್ಲಾಘನೀಯ. ಕ್ಷೇತ್ರದಲ್ಲಿ ಇರುವ ಯಾರೇ ಆಗಲಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಏನೇ ಕೆಲಸ ಕಾರ್ಯಗಳು ಇದ್ದರೂ, ಅದನ್ನು ಕಾನೂನಿನ ಅಡಿಯಲ್ಲಿ ಮಾಡಿಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕನಕ ನೌಕರರ ಸಂಘದ ಗೌರವಾಧ್ಯಕ್ಷ ಕೆ. ಜೀನಹಳ್ಳಿ ಮಾತನಾಡಿ, ತಾಲೂಕಿನಲ್ಲಿ ಕನಕ ನೌಕರರ ಸಂಘವನ್ನು ಬಲಗೊಳಿಸುವ ಪ್ರಯತ್ನವನ್ನು ಸರ್ಕಾರಿ ನೌಕರರು ಮಾಡಬೇಕು ಎಂದರು.

ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಸಿ. ಮೋಹನ್ ನೆಲಹೊನ್ನೆ ಮಾತನಾಡಿ, ತಾಲೂಕಿನಲ್ಲಿ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲ ಸಮಾಜದ ಅಧಿಕಾರಿಗಳಿಗೂ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಡಬೇಕು. ಹಾಗೆಯೇ, ನಮ್ಮ ಸಮಾಜದ ಬಂಧುಗಳು ಸಮಾಜದ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಆಗ ಮಾತ್ರ ಅಂತಹ ಅಧಿಕಾರಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಸಮಾಜಕ್ಕೂ ತಾಲೂಕಿಗೂ ಹೆಸರು ತರಲು ಸಾಧ್ಯ ಎಂದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಮಪ್ಪ, ತಾಲೂಕು ಕನಕ ನೌಕರರ ಸಂಘದ ಅಧ್ಯಕ್ಷ ಶಿವಪದ್ಮ ಅವರು ಮಾತನಾಡಿದರು.

ವೇದಿಕೆಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ್, ಚನ್ನಗಿರಿ ಶಿಕ್ಷಕ ಮಂಜಪ್ಪ, ಆರೋಗ್ಯ ಇಲಾಖೆಯ ನಿಂಗಪ್ಪ, ಶಿಕ್ಷಕರಾದ ದೊಂಕತ್ತಿ ನಾಗರಾಜ್, ಎಸ್.ಬಸವರಾಜ್, ಎಚ್.ಕೆ. ಪರಮೇಶ್ವಪ್ಪ, ಎಂ.ಸಿ. ಮಹಾಂತೇಶ್ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.

- - - -21ಎಚ್.ಎಲ್.ಐ2:

ಹೊನ್ನಾಳಿ ತಾಲೂಕು ಕನಕ ನೌಕರರ ಸಂಘ ವತಿಯಿಂದ ಬಿಇಒ ಕೆ.ಟಿ. ನಿಂಗಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿದರು.