ಸಾರಾಂಶ
ಹವ್ಯಕರಲ್ಲಿ ಅರ್ಥ ಸಾಧನೆಗಿಂತ ಮುಂದಿನ ಭವಿಷ್ಯ ಸಾಧನೆಯ ಗುರಿಯಾಗಿದೆ. ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಗುಣ ಹವ್ಯಕರದ್ದಾಗಿದೆ.
ಶಿರಸಿ: ಇತ್ತೀಚಿನ ದಿನಗಳಲ್ಲಿ ಪ್ರಾಚೀನ ವಿದ್ಯೆ ಕ್ಷೀಣಿಸುತ್ತಿದ್ದು, ಸಂಸ್ಕೃತ ಕಲಿತು, ಉಳಿಸಿ ಬೆಳೆಸಬೇಕು. ಸಂಸ್ಕಾರ, ಸಂಸ್ಕೃತಿಗಳ ಬೆಳವಣಿಗೆಗೆ ಕಾರಣರಾಗಬೇಕು ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ತಿಳಿಸಿದರು.ಭಾನುವಾರ ನಗರದ ತೋಟಗಾರರ ಕಲ್ಯಾಣಮಂಟಪದಲ್ಲಿ ಅಖಿಲ ಹವ್ಯಕ ಮಹಾಸಭೆ ಹಮ್ಮಿಕೊಂಡ ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಹವ್ಯಕರಲ್ಲಿ ಅರ್ಥ ಸಾಧನೆಗಿಂತ ಮುಂದಿನ ಭವಿಷ್ಯ ಸಾಧನೆಯ ಗುರಿಯಾಗಿದೆ. ಎಲ್ಲರನ್ನೂ ಸೇರಿಸಿಕೊಂಡು ಹೋಗುವ ಗುಣ ಹವ್ಯಕರದ್ದಾಗಿದೆ. ಸಮಾಜ ಬೆಳೆಸುವ ಗುಣ ಇವರಲ್ಲಿದೆ. ನಮ್ಮ ನೆಲದ ಹವ್ಯಕರು ಪರಂಪರೆಯ ಮೂರು ಪಾಂಡಿತ್ಯ ಉಳಿಸಿಕೊಂಡು ಮುನ್ನಡೆದಿದ್ದಾರೆ. ಪರಂಪರೆಯಿಂದ ವೇದ ವಿದ್ಯೆಗಳನ್ನು ಈ ಸಮುದಾಯ ಉಳಿಸಿಕೊಂಡಿದ್ದು, ಅನುಷ್ಠಾನದ ಮೂಲಕ ಬೆಳೆಸಿಕೊಂಡಿದ್ದಾರೆ. ಭವಿಷ್ಯಕ್ಕಾಗಿ ಜೋತಿಷ್ಯ ಉಳಿಸಿದ್ದಾರೆ. ಅನ್ನಕ್ಕಾಗಿ ಕೃಷಿ ಜತೆ ಬದುಕು ನಡೆಸುತ್ತಿದ್ದಾರೆ ಎಂದರು.
ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ. ಗಿರಿಧರ ಕಜೆ ಮಾತನಾಡಿ, ಪುರೋಹಿತರನ್ನು, ಶಿಕ್ಷಕರನ್ನು ಹೆಚ್ಚು ನೀಡಿದ್ದು ಶಿರಸಿ ಶೈಕ್ಷಣಿಕ ಜಿಲ್ಲೆ. ಶಿಕ್ಷಕರ ಮೂಲಕ, ಅವರಿಗೆ ಸ್ಫೂರ್ತಿ ನೀಡಿ ಭವ್ಯ ಭಾರತದ ಭದ್ರ ಬುನಾದಿಗೆ ಅಡಿಪಾಯ ಹಾಕುವ ಅಪರೂಪದ ಕಾರ್ಯಕ್ರಮ. ಗುರು ಶಿಷ್ಯ ಸಂಬಂಧ ಉಳಿಸಿಕೊಂಡ ಶಿಕ್ಷಕರ ಕಾರ್ಯ ಜಗತ್ತಿಗೇ ಮಾದರಿ ಎಂದರು.ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ಚಿಂತಕ ಡಾ. ಕೆ.ಪಿ. ಪುತ್ತೂರಾಯ, ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಡಯಟ್ ಪ್ರಾಚಾರ್ಯ ಎಂ.ಎಸ್. ಹೆಗಡೆ, ಮಹಾಸಭೆ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಮಾಜಿ ಅಧ್ಯಕ್ಷ ಜಿ.ವಿ. ಹೆಗಡೆ ಕಾನಗೋಡ, ಸಂಚಾಲಕ ಡಿ.ಪಿ. ಹೆಗಡೆ ಮತ್ತಿತರರು ಇದ್ದರು. ಶಿಕ್ಷಕರಾದ ರಾಮಚಂದ್ರ ಭಟ್ಟ, ಪ್ರದೀಪ ಜೋಶಿ ವೇದ ಘೋಷ ಹಾಡಿದರು. ನಿರ್ದೇಶಕ ಶಶಾಂಕ ಹೆಗಡೆ ಶಿಗೇಹಳ್ಳಿ ಸ್ವಾಗತಿಸಿದರು. ನಾರಾಯಣ ಭಾಗವತ್ ನಿರೂಪಿಸಿದರು. ಮುಂಜಾನೆ ನಗರದ ಯೋದ ಮಂದಿರದಲ್ಲಿ ಹವ್ಯಕ ಶಿಕ್ಷಕಿಯರಿಂದ ಕುಂಕುಮಾರ್ಚನೆ ನಡೆಯಿತು.ಸಮಾವೇಶದಲ್ಲಿ ಗಾಯತ್ರಿ ಮಹತ್ವದ ಕುರಿತು ವೇ.ಮೂ. ವಿಶ್ವನಾಥ ಭಟ್ಟ ನೀರಗಾನ, ಭಾರತದ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಶಿಕ್ಷಕರ ಸಮಾವೇಶದ ಕುರಿತು ಅನಂತಮೂರ್ತಿ ಭಟ್ಟ ಯಲುಗಾರ ಉಪನ್ಯಾಸ ನೀಡಿದರು. ಶಿಕ್ಷಕರಿಗಾಗಿ ಆಶುಭಾಷಣ, ಪ್ರಬಂಧ ಸ್ಪರ್ಧೆ, ಬಳ್ಳಿ ರಂಗೋಲಿ, ಕಸದಿಂದ ರಸ, ಹವ್ಯಕ ಸಂಪ್ರದಾಯ ಗೀತೆ, ಚುಟುಕು ಗೋಷ್ಠಿ ಸೇರಿದಂತೆ ಅನೇಕ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.