ರಾಮನಗರ: ತೆಂಗು ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿ ತೆಂಗು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ರೂಪಿಸಿರುವ ಕಾರ್ಯಕ್ರಮಗಳನ್ನು ಬೆಳೆಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಮ್‌ ನಾಥ್ ಠಾಕೂರ್ ಕಿವಿಮಾತು ಹೇಳಿದರು.

ರಾಮನಗರ: ತೆಂಗು ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಬರಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ತೆಂಗು ಅಭಿವೃದ್ಧಿ ಮಂಡಳಿ ತೆಂಗು ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ರೂಪಿಸಿರುವ ಕಾರ್ಯಕ್ರಮಗಳನ್ನು ಬೆಳೆಗಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ರಾಮ್‌ ನಾಥ್ ಠಾಕೂರ್ ಕಿವಿಮಾತು ಹೇಳಿದರು.

ನಗರದ ಶ್ರೀ ಮಂಜುನಾಥ ಕನ್ವೆನ್ಷನ್ ಹಾಲ್‌ನಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಸಮಾರಂಭ ಉದ್ಘಾಟಿಸಿದ ಅವರು, ತೆಂಗಿನ ಕೃಷಿಯಲ್ಲಿ ವಿಶ್ವದಲ್ಲಿ ಭಾರತ ದೇಶವು ಫಿಲಿಫಿನ್ಸ್, ಇಂಡೋನೇಷ್ಯಾ, ಶ್ರೀಲಂಕಾ ಜೊತೆ ಪೈಪೋಟಿ ನಡೆಸುತ್ತಿದೆ. ಭಾರತ ಮುನ್ನಡೆ ಸಾಧಿಸಿ ಅಗ್ರಗಣ್ಯ ಸಾಧಿಸಲು ಬೆಳೆಗಾರರು ಹೆಚ್ಚಿನ ಪರಿಶ್ರಮ ವಹಿಸಬೇಕಿದೆ ಎಂದರು.

ಕೃಷಿ ಕ್ಷೇತ್ರದಲ್ಲಿ ಶೇ.17.61 ಪ್ರದೇಶದಲ್ಲಿ ತೆಂಗು ಬೆಳೆಯುತ್ತಿದ್ದು, ಅದರಲ್ಲಿ ಶೇ.28.81ರಷ್ಟು ತೆಂಗು ಉತ್ಪಾದನೆ ಆಗುತ್ತಿದೆ. ಪ್ರತಿ ಹೆಕ್ಟೇರ್ ನಲ್ಲಿ 9572 ತೆಂಗಿನಕಾಯಿ ಬೆಳೆಯುತ್ತಿದ್ದೇವೆ. ಅನೇಕ ಕುಟುಂಬದವರ ಜೀವನ ತೆಂಗು ಬೆಳೆಯನ್ನೇ ಅವಲಂಬಿಸಿದ್ದು, ಅವರೆಲ್ಲರ ಆರ್ಥಿಕ ಪ್ರಗತಿಗಾಗಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.

ರೈತರು ತೆಂಗು ಬೆಳೆಯನ್ನು ಕಷ್ಟದಿಂದ ಬೆಳೆಯುತ್ತಾರೆ. ಆದರೆ, ತೆಂಗು ಹಿಂದೂ ಧರ್ಮದ ಪ್ರತೀಕವಾಗಿದೆ. ಅದನ್ನು ನಾವೆಲ್ಲರೂ ಪೂಜೆಗೆ ಬಳಕೆ ಮಾಡುತ್ತೇವೆ. ಅಂತಹ ಗುಣ ವಿಶೇಷತೆ ಹೊಂದಿರುವ ತೆಂಗನ್ನು ಬೆಳೆಯುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಕಳೆದ 30 ವರ್ಷಗಳಿಂದ ದೇಶದಲ್ಲಿ ಕೃಷಿ ಭೂಮಿ ಮತ್ತು ಮನುಷ್ಯನ ಸ್ವಾಸ್ಥ್ಯ ಹಾಳಾಗಿದೆ. ಇದಕ್ಕೆ ರಾಸಾಯನಿಕ ಗೊಬ್ಬರಗಳ ಬಳಕೆ ಕಾರಣವಾಗಿದೆ. ಆದ್ದರಿಂದ ರೈತರು ನೈಸರ್ಗಿಕ ಕೃಷಿಯತ್ತ ಗಮನ ಹರಿಸಿ ಭೂಮಿ ಮತ್ತು ಮನುಷ್ಯನ ಸ್ವಾಸ್ಥ್ಯ ಕಾಪಾಡಬೇಕು ಎಂದು ರಾಮ್‌ ನಾಥ್ ಠಾಕೂರ್ ಹೇಳಿದರು.

ಎಳನೀರಿನಲ್ಲಿ ರಾಸಾಯನಿಕ ಅಂಶ ಪತ್ತೆ:

ಬೆಂಗಳೂರು ಕೃಷಿ ವಿವಿ ಉಪಕುಲಪತಿ ಸುರೇಶ್ ಮಾತನಾಡಿ, ಪ್ರತಿಯೊಂದು ಬೆಳೆಯನ್ನು ಬೆಳೆಯುವಾಗ ಮಣ್ಣನ್ನು ಸದೃಢ ಮಾಡಬೇಕು. ಮಣ್ಣಿನ ಪೋಷಕಾಂಶಗಳನ್ನು ಕಾಪಾಡಿಕೊಳ್ಳದಿದ್ದರೆ ಬೆಳೆಗಳು ರೋಗಗಳಿಗೆ ತುತ್ತಾಗುತ್ತವೆ. ಪ್ರತಿ ಮನುಷ್ಯನಿಗೆ ಸಿಗುವ ಆಹಾರ ಮಣ್ಣಿನಿಂದಲೇ ಬರುತ್ತದೆ. ಹೀಗಿರುವಾಗ ತೆಂಗು ಬೆಳೆಯುವ ಜಮೀನುಗಳಲ್ಲಿ ಕೀಟನಾಶಕಗಳ ಸಿಂಪಡಣೆ ಹಾಗೂ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣು ತನ್ನ ಫಲವತ್ತತೆ ಕಳೆದುಕೊಳ್ಳುವ ಜೊತೆಗೆ ಗಿಡಗಳು ಕೀಟಬಾಧೆಗೆ ತುತ್ತಾಗುತ್ತಿವೆ ಎಂದರು.

ಇತ್ತೀಚೆಗೆ 8 ವಿವಿಧ ತಳಿಯ ಎಳನೀರನ್ನು ಸಂಶೋಧನೆಗೆ ಒಳಪಡಿಸಿದಾಗ ಎಲ್ಲದರಲ್ಲೂ ರಾಸಾಯನಿಕ ಅಂಶಗಳು ಪತ್ತೆಯಾಗಿವೆ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕೀಟನಾಶಕ ಬಳಸಿದ ಎರಡು ತಿಂಗಳವರೆಗೆ ಎಳನೀರನ್ನು ಕೋಯ್ಲು ಮಾಡಬಾರದು. ರೈತರು ಅನುಸರಿಸುತ್ತಿರುವ ಪದ್ಧತಿಗಳ ತಪ್ಪಿನಿಂದ ಕೀಟಬಾಧೆಗಳು ಹೆಚ್ಚಾಗುತ್ತಿವೆ. ನೈಸರ್ಗಿಕ ಕೃಷಿ ಅವಲಂಭಿಸುವುದರಿಂದ ಇಳುವರಿ ಹೆಚ್ಚಳದ ಜೊತೆಗೆ ಕೀಟಬಾಧೆಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹೇಳಿದರು.

ಒಣ ಭೂಮಿಯಲ್ಲಿ ತೆಂಗುಬೆಳೆಯನ್ನು ಹೆಚ್ಚಾಗಿ ಗೊಬ್ಬರ ಮತ್ತು ಕೀಟನಾಶಕ ಬಳಸದೆ ಬೆಳೆಯಲಾಗುತ್ತಿತ್ತು. ಕ್ರಮೇಣ ತೆಂಗು ಬೆಳೆಯನ್ನು ಆರ್ಥಿಕ ಬೆಳೆಯಾಗಿ ಗುರುತಿಸಿ ಹೆಚ್ಚು ಸುಧಾರಿಸುವ ಪ್ರಯತ್ನಗಳು ನಡೆಯುತ್ತಿವೆ. ತೆಂಗು ಬೆಳೆಯನ್ನು ಬೆಳೆಯುವ ಸಮಯದಲ್ಲಿ ರೈತರಿಗೆ ಉತ್ಪಾದನಾ ತಾಂತ್ರಿಕತೆ, ಉತ್ಪನ್ನ ಸಂರಕ್ಷಣಾ ಕ್ರಮಗಳು, ಕೋಯ್ಲಿನ್ನೋತ್ತರ ಸಮಸ್ಯೆ ಗಳು ಕಾಡುತ್ತಿವೆ. ಇದಕ್ಕೆಲ್ಲ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುಬ ನಾಗರಾಜನ್ ಮಾತನಾಡಿ, ದೇಶದ ಅನೇಕ ರಾಜ್ಯಗಳಲ್ಲಿ ರೈತರು ತೆಂಗು ಬೆಳೆಯನ್ನೇ ಅವಲಂಬಿಸಿದ್ದಾರೆ. ತೆಂಗು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮಂಡಳಿಯಲ್ಲಿ ಸಾಕಷ್ಟು ಯೋಜನೆಗಳು ಇವೆ. ಅವುಗಳನ್ನು ರೈತರು ಮತ್ತು ವಾಣಿಜ್ಯೋದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಮಾಜಿ ಶಾಸಕ ಮಹಿಮಾ ಪಟೇಲ್ , ತೆಂಗು ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರಭಾತ್ ಕುಮಾರ್, ಅಭಿವೃದ್ಧಿ ಅಧಿಕಾರಿ ಡಾ.ಬಿ.ಹನುಮಂತೇಗೌಡ, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಮತ್ತಿತರರು ಉಪಸ್ಥಿತರಿದ್ದರು.

ಬಾಕ್ಸ್‌..........

ಸಾವಯವ ರಾಜಕಾರಣ ಅಗತ್ಯ: ಮಹಿಮಾ ಪಟೇಲ್

ರಾಮನಗರ: ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾವಯವ ಕೃಷಿ ಜೊತೆಗೆ ಸಾವಯವ ರಾಜಕಾರಣ ಅವಲಂಬಿಸುವುದು ಅಗತ್ಯವಾಗಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಅಭಿಪ್ರಾಯಪಟ್ಟರು.

ವಿಶ್ವ ತೆಂಗು ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ರಾಸಾಯನಿಕ ವಸ್ತುಗಳ ಬಳಕೆಯಿಂದ ಮನುಷ್ಯನ ಆರೋಗ್ಯ ಹಾಳಾಗುತ್ತಿದ್ದು, ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾನೆ. ಅದೇ ರೀತಿ ಹಣ ಅನ್ನುವ ಗೊಬ್ಬರ, ಜಾತಿ ಧರ್ಮ ಅನ್ನುವ ವಿಷಕಾರಿಕ ವಸ್ತುಗಳನ್ನು ಹಾಕುತ್ತಿರುವುದರಿಂದ ರಾಜಕಾರಣ ಕಲುಷಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜಕಾರಣದಲ್ಲಿ ವಿಷ ಹಾಕಿದ ರೆ ಸಮಾಜವೇ ಕೆಟ್ಟಿ ಹೋಗುತ್ತದೆ. ಆದ್ದರಿಂದ ಸಾವಯವ ರಾಜಕಾರಣ, ಸಾವಯವ ಕೃಷಿಯನ್ನು ಅವಲಂಬಿಸಬೇಕು. ರೈತರು ಕೃಷಿ ಕ್ಷೇತ್ರ ಹಾಗೂ ಪ್ರಪಂಚದ ಉಳಿವಿಗೆ ಅವಶ್ಯಕವಾಗಿದೆ. ಕೃಷಿ ಮಾಡುವುದೇ ನಿಜವಾದ ರಾಜಕಾರಣ. ಉಳುಮೆ ಮಾಡುವವರು ನಿಜವಾದ ಯೋಗಿಗಳು. ಆ ಯೋಗಿಗಳು ಸಂತೋಷವಾಗಿರುವುದು ಮುಖ್ಯವಾದದ್ದು. ಆದ್ದರಿಂದ ರೈತರು ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ಎತೇಚ್ಛವಾಗಿ ಬಳಸುತ್ತಿರುವ ರಾಸಾಯನಿಕ ಕಡಿಮೆ ಮಾಡಿ ಸಾವಯವ ಕೃಷಿ ಅವಲಂಬಿಸಬೇಕು ಎಂದು ಹೇಳಿದರು.

ಬಾಕ್ಸ್‌...........

ವಂದಾರಗುಪ್ಪೆಯಲ್ಲಿ ಕೋಕೋ ಗ್ರಾಮಕ್ಕೆ ಸಿದ್ಧತೆ: ಸಿಇಒ

ರಾಮನಗರ: ಜಿಲ್ಲಾ ಪಂಚಾಯಿತಿ ಅನುದಾನದಿಂದ ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಗ್ರಾಮದಲ್ಲಿ ಕೋಕೋ ಗ್ರಾಮವನ್ನು ತೆರೆಯುತ್ತಿದ್ದೇವೆ ಎಂದು ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಹೇಳಿದರು.

ವಿಶ್ವ ತೆಂಗು ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಕೋಕೋ ಗ್ರಾಮದಲ್ಲಿ ತೆಂಗಿನಿಂದ ತಯಾರಾದ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗುವುದು. ಇದೆಲ್ಲವನ್ನು ಮಹಿಳಾ ಸ್ವ ಸಹಾಯ ಸಂಘಗಳೇ ನಿರ್ವಹಣೆ ಮಾಡಲಿವೆ. ತೆಂಗು ಉಪ ಉತ್ಪನ್ನಗಳಿಂದ ರೈತರ ಆದಾಯ ಹೆಚ್ಚಾಗುವ ಜೊತೆಗೆ ಮಹಿಳೆಯರಿಗೆ ಉದ್ಯೋಗಾವಕಾಶ ನೀಡಿದಂತೆಯೂ ಆಗುತ್ತದೆ. ಅಲ್ಲದೆ, ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಿದಂತಾಗುತ್ತದೆ ಎಂದರು.

ರಾಮನಗರ ಜಿಲ್ಲೆಯಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಈ ತೆಂಗಿನಿಂದ ಉಪಉತ್ಪನ್ನಗಳನ್ನು ತಯಾರು ಮಾಡಬಹುದಾದ ಕಾರಣ ರೈತರಿಗೆ ವರದಾನವಾಗಿದೆ. ಈಗ ರೈತರಿಗೆ ಕೃಷಿಯಿಂದ ಸಾಕಷ್ಟು ಆದಾಯ ಬರುತ್ತಿಲ್ಲ. ಆದ್ದರಿಂದ ಕೃಷಿಕರು ಆದಾಯ ಹೆಚ್ಚಿಸಿಕೊಳ್ಳಲು ತೆಂಗು ಬೆಳೆಯುವುದರ ಜೊತೆಗೆ ಬಹು ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ದಿಗ್ವಿಜಯ್ ಬೋಡ್ಕೆ ಸಲಹೆ ನೀಡಿದರು.

18ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದ ಶ್ರೀ ಮಂಜುನಾಥ ಕನ್ವೆನ್ಷನ್ ಹಾಲ್‌ನಲ್ಲಿ ತೆಂಗು ಅಭಿವೃದ್ಧಿ ಮಂಡಳಿಯ ವತಿಯಿಂದ ಆಯೋಜಿಸಿದ್ದ ವಿಶ್ವ ತೆಂಗು ದಿನಾಚರಣೆ ಸಮಾರಂಭವನ್ನು ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವರಾದ ರಾಮನಾಥ ಠಾಕೂರ್ ಉದ್ಘಾಟಿಸಿದರು.

2.ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಲಾಗಿರುವ ವಿಶ್ವ ತೆಂಗು ದಿನಾಚರಣೆಯಲ್ಲಿ ತೆಂಗು ಉತ್ಪ ,ನ್ನಗಳ ವಿವಿಧ ಮಳಿಗೆಗಳನ್ನು ಕೇಂದ್ರದ ಕೃಷಿ ಖಾತೆಯ ರಾಜ್ಯ ಸಚಿವರಾದ ರಾಮನಾಥ ಠಾಕೂರ್ ಉದ್ಘಾಟಿಸಿದರು.