ಸ್ವಚ್ಚ, ಸುಂದರ ಶಿವಮೊಗ್ಗ ನಗರ ನಿರ್ಮಾಣಕ್ಕೆ ಶ್ರಮಿಸಿ: ನ್ಯಾ.ಸುಭಾಷ್ ಅಡಿ

| Published : Dec 15 2023, 01:30 AM IST

ಸ್ವಚ್ಚ, ಸುಂದರ ಶಿವಮೊಗ್ಗ ನಗರ ನಿರ್ಮಾಣಕ್ಕೆ ಶ್ರಮಿಸಿ: ನ್ಯಾ.ಸುಭಾಷ್ ಅಡಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸ್ಥಳೀಯ ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಬಟ್ಟೆಯ ಬ್ಯಾಗುಗಳನ್ನು ಬಳಸಲು ಜನರಿಗೆ ಪ್ರೇರಣೆ ನೀಡಬೇಕು. ಪುನರ್ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್‍ ಸಂಗ್ರಹಿಸಿ, ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಶೇ.8ರಷ್ಟು ಬಳಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವ ಬಿತ್ತಿ ಫಲಕಗಳು, ಪೋಸ್ಟರ್‌ಗಳು ಬಂಟಿಂಗ್ಸ್‌ಗಳನ್ನು ನಿಷೇಧಿಸಬೇಕು. ಇಲ್ಲಿನ ಪರಿಸರ ಹಾಳಾಗದಂತೆ ಅದನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. ನಗರದ ಪುಟ್‍ಪಾತ್‍ಗಳನ್ನು ಅಲ್ಲಿನ ತ್ಯಾಜ್ಯ ಸ್ವಚ್ಚವಾಗಿಸಿ, ಜನಸಂಚಾರಕ್ಕೆ ಮುಕ್ತವಾಗಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಆಗಬೇಕಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು ಎನಿಸಿರುವ ಶಿವಮೊಗ್ಗ ಜಿಲ್ಲೆ ಸ್ವಚ್ಚ, ಸುಂದರ ಹಾಗೂ ಸದಾ ಹಸಿರಾಗಿರುವಂತೆ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಅಗತ್ಯವಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಧ್ಯಕ್ಷ ನ್ಯಾ.ಸುಭಾಷ್ ಬಿ. ಅಡಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳು, ಜನಸಂದಣಿ ಇರುವ ಬಸ್‍ ನಿಲ್ದಾಣ, ರೈಲ್ವೆ ಸ್ಟೇಷನ್‍ಗಳು ಸೇರಿದಂತೆ ಎಲ್ಲೆಡೆಯಲ್ಲೂ ಏಕಬಳಕೆ ಪ್ಲಾಸ್ಟಿಕ್‍ ಕಡ್ಡಾಯ ನಿಷೇಧಿಸಬೇಕು. ನಿರ್ಬಂಧವನ್ನು ನಿರ್ಲಕ್ಷಿಸುವ ವ್ಯಕ್ತಿ ಅಥವಾ ಅಂಗಡಿ- ಮುಂಗಟ್ಟುಗಳ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಸ್ಥಳೀಯ ಸಂಘಟನೆಗಳು ಹಾಗೂ ದಾನಿಗಳ ಸಹಕಾರದೊಂದಿಗೆ ಬಟ್ಟೆಯ ಬ್ಯಾಗುಗಳನ್ನು ಬಳಸಲು ಜನರಿಗೆ ಪ್ರೇರಣೆ ನೀಡಬೇಕು. ಪುನರ್ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್‍ ಸಂಗ್ರಹಿಸಿ, ರಸ್ತೆಗಳ ನಿರ್ಮಾಣ ಕಾರ್ಯದಲ್ಲಿ ಶೇ.8ರಷ್ಟು ಬಳಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ನಗರದ ಸೌಂದರ್ಯವನ್ನು ಹಾಳು ಮಾಡುತ್ತಿರುವ ಬಿತ್ತಿ ಫಲಕಗಳು, ಪೋಸ್ಟರ್‌ಗಳು ಬಂಟಿಂಗ್ಸ್‌ಗಳನ್ನು ನಿಷೇಧಿಸಬೇಕು. ಇಲ್ಲಿನ ಪರಿಸರ ಹಾಳಾಗದಂತೆ ಅದನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬರದ್ದಾಗಿದೆ. ನಗರದ ಪುಟ್‍ಪಾತ್‍ಗಳನ್ನು ಅಲ್ಲಿನ ತ್ಯಾಜ್ಯ ಸ್ವಚ್ಚವಾಗಿಸಿ, ಜನಸಂಚಾರಕ್ಕೆ ಮುಕ್ತವಾಗಿಸಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಆಗಬೇಕಾಗಿದೆ ಎಂದರು.ಮೊದಲು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು, ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್‍ಗಳ ಬಳಕೆಯನ್ನು ನಿಷೇಧಿಸಬೇಕು. ಕಚೇರಿ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ತ್ಯಾಜ್ಯವನ್ನು ಸರಿಯಾದ ಕ್ರಮದಲ್ಲಿ ಬೇರ್ಪಡಿಸಿ, ವಿಲೇ ಮಾಡಬೇಕು. ಎಲ್ಲೆಂದರಲ್ಲಿ ಪೋಸ್ಟರ್‌ಗಳ ಹಾಕುವ ಬದಲಾಗಿ ಎಲ್.ಇ.ಡಿ. ಪರದೆಗಳು, ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.

ನಗರ ಪ್ರದೇಶಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮ, ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು, ಸಭಾಂಗಣಗಳ ಕಾರ್ಯಕ್ರಮಗಳು ನಡೆಯಲು ಅನುಮತಿ ಪಡೆಯಬೇಕು. ನಂತರ ಉತ್ಪತ್ತಿಯಾಗುವ ತ್ಯಾಜ್ಯದ ಸಮರ್ಪಕ ವಿಲೇವಾರಿಗೂ ಸ್ಥಳೀಯ ಸಂಸ್ಥೆಗಳು ಶುಲ್ಕ ನಿಗದಿಪಡಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್, ಜಿಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಅರಣ್ಯಾಧಿಕಾರಿ ಶಿವಶಂಕರ್, ಪಾಲಿಕೆ ಆಯುಕ್ತ ಮಾಯಣ್ಣಗೌಡ, ನಗರ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಮನೋಹರ್ ಮತ್ತಿತರರು ಇದ್ದರು.

- - - ಕೋಟ್‌-1

ಇ-ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಹಾಗೂ ಅದನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ ಪ್ರತ್ಯೇಕ ವಾಹನ ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ. ಮನೆಗಳಿಂದ ಸಂಗ್ರಹಿಸಲಾಗುವ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ, ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಕುಡಿಯುವ ನೀರಿನೊಂದಿಗೆ ಒಂದು ಹನಿ ಕಲುಷಿತ ನೀರು ಬೆರೆಯದಂತೆ ಕ್ರಮ ವಹಿಸಬೇಕು. ಈ ಎಲ್ಲಾ ವಿಷಯಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯ

- ಮಾಯಣ್ಣಗೌಡ, ಆಯುಕ್ತ, ಮಹಾನಗರ ಪಾಲಿಕೆ

- - -ಕೋಟ್‌-2

ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿ ಮಾಹೆ ನಿಗದಿಪಡಿಸಿದ ದಿನಾಂಕದಂದು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿ ಸಭೆ ಕರೆದು ಚರ್ಚಿಸಲಾಗುತ್ತಿದೆ. ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಮನುಷ್ಯತ್ವ ಮರೆತ ವ್ಯಸನಿಗಳು ಮದ್ಯ ಸೇವಿಸಿ, ಬಾಟಲ್‍ಗಳನ್ನು ಪುಡಿಗಟ್ಟುತ್ತಿರುವುದು ತೀರಾ ಅಮಾನವೀಯ. ಅರಣ್ಯದಂಚಿನ ಪ್ರದೇಶಗಳಲ್ಲೂ ಬಿಸಾಕುವ ಗಾಜಿನ ಹಾಗೂ ಪ್ಲಾಸ್ಟಿಕ್ ಬಾಟಲ್‍ಗಳು ಪರಿಸರಕ್ಕೆ ಮಾರಕವಾಗಿವೆ

- ಡಾ. ಆರ್.ಸೆಲ್ವಮಣಿ, ಜಿಲ್ಲಾಧಿಕಾರಿ

- - - -14ಎಸ್‌ಎಂಜಿಕೆಪಿ06:

ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾ.ಸುಭಾಷ್ ಬಿ. ಅಡಿ ಮಾತನಾಡಿದರು.