ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು. ಅದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವುದು ಕಳವಳಕಾರಿ.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

ಕನ್ನಡಪ್ರಭ ವಾರ್ತೆ ಗದಗ

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು. ಅದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿರುವುದು ಕಳವಳಕಾರಿ. ಜೀವನ ಅತ್ಯಮೂಲ್ಯ. ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಯಾರು ಪ್ರಯತ್ನಿಸಿ ಯಶಸ್ವಿಯಾಗುತ್ತಾರೋ ಅವರು ದೇವರ ಕೆಲಸ ಮಾಡಿದ ಹಾಗೆ. ಎಲ್ಲರೂ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಶ್ರಮಿಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ನಗರದ ಡಿ.ಜಿ.ಎಂ ಆರ್ಯುವೇದಿಕ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ, ಕೆ.ಎಚ್.ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆತ್ಮಹತ್ಯೆಗೆ ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಅಂದರೆ ಮಾನವ ಸಂಘಜೀವವನ್ನು ತೊರೆದು ಏಂಕಾಗಿತನದ ಕಡೆ ಹೋಗುತ್ತಿರುವುದು ಮುಖ್ಯ ಕಾರಣ. ಆತ್ಮಹತ್ಯೆ ಆಲೋಚನೆಗಳು ಬಂದಂತಹ ಸಮಯದಲ್ಲಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯ ಸೇವೆ ಪಡೆಯಿರಿ ಹಾಗೂ ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಸಹಾಯ ಪಡೆಯಿರಿ. ಅಲ್ಲದೆ ಹದಿಹರೆಯದ ವಯಸ್ಸಿನ ಮಕ್ಕಳ ಕಡೆ ಹೆಚ್ಚು ಗಮನವನ್ನು ನೀಡುವುದು ಅವಶ್ಯಕ ಎಂದರು.

ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ವಿಶ್ವದಲ್ಲಿ ಪ್ರತಿ 40 ಸೆಕೆಂಡಿಗೊಂದು ಆತ್ಮಹತ್ಯೆ ಅಂದರೆ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಮ್ಮ ದೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಹಲವಾರು ಕಾರಣಗಳಿದ್ದು ಅದರಲ್ಲಿ ಕೌಟುಂಬಿಕ ಸಮಸ್ಯೆ, ಪ್ರೀತಿ ಪ್ರೇಮಕ್ಕೆ ಸಂಬಂಧಿಸಿದ ಸಮಸ್ಯೆ. ಸಮಸ್ಯೆ ನಿಭಾಯಿಸಲು ಬೇಕಾದ ಜೀವನ ಕೌಶಲ್ಯಗಳ ಕೊರತೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ. ಜಿ.ಎಸ್.ಪಲ್ಲೆದ ಮಾತನಾಡಿದರು.

ಮನೋ ವೈದ್ಯ ಡಾ. ಶ್ಯಾಮಸುಂದರ ಬಾಲೆಹೊಸುರ ಅವರು, ಆತ್ಮಹತ್ಯೆಯ ವ್ಯಾಖ್ಯಾನ, ಕಾರಣ ಹಾಗೂ ತಡೆಗಟ್ಟುವಲ್ಲಿ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿವರವಾಗಿ ತಿಳಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ ಪ್ರತಿಜ್ಞಾ ವಿಧಿ ಬೋಧಿಸಿದರು.

ಅಧ್ಯಕ್ಷತೆಯನ್ನ ಪ್ರಾಂಶುಪಾಲ ಡಾ. ಎಸ್.ಎಂ. ಬೆಳವಡಿ ವಹಿಸಿದ್ದರು. ಆರೋಗ್ಯ ಮೆಲ್ವೀಚಾರಕ ಆರ್.ಎಸ್. ಬಡ್ಡಿ, ಡಾ. ರಾಜೇಂದ್ರ ಗಡಾದ, ಶ್ರೀಧರ, ವಿನಾಯಕ ಕಾಳೆ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಸಾಧನಾ ಹಾಗೂ ಮಾನಸಾ ಪ್ರಾರ್ಥಿಸಿದರು. ಎಸ್.ಡಿ. ಬೆನ್ನೂರ ನಿರೂಪಿಸಿದರು. ಎಸ್.ಎಫ್. ಹನಕನಹಳ್ಳಿ ವಂದಿಸಿದರು.