ಹೇಮೆಯ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಗೆ ತೀವ್ರ ವಿರೋಧ

| Published : May 15 2024, 01:31 AM IST

ಸಾರಾಂಶ

ಹೇಮಾವತಿ ಯೋಜನೆಯ 72 ಕಿಮೀಯಿಂದ 197 ಕಿಮೀವರೆಗೆ ನಾಲೆಯ ಆಧುನೀಕರಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಇದಕ್ಕಾಗಿ ಸರಕಾರ ಸುಮಾರು 900 ಕೋಟಿ ರು.ಗಳನ್ನು ಖರ್ಚು ಮಾಡುತ್ತಿದೆ. ಇದೇ ನಾಲೆಯಿಂದ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದು. ಏಕ್ಸಪ್ರೆಸ್ ಕೆನಾಲ್‌ನ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ತುಮಕೂರು

ಹೇಮಾವತಿ ನಾಲೆಯನ್ನು ಡೈವರ್ಟ್ ಮಾಡಿ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರರ ಕಡೆಗಳಿಗೆ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್‌ನಿಂದ ಇಡೀ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ತೊಂದರೆಯಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಜನರು ಪಕ್ಷಾತೀತವಾಗಿ ಮೇ 16ರಂದು ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮಾಜಿ ಶಾಸಕ ಎಚ್.ನಿಂಗಪ್ಪ ಮನವಿ ಮಾಡಿದ್ದಾರೆ.

ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 10 ಅಡಿ ವ್ಯಾಸದ ಕೊಳವೆ ಮೂಲಕ ಗ್ರಾವಿಟಿಯಲ್ಲಿ ನೀರು ತೆಗೆದುಕೊಂಡು ಹೋಗಲು ಕಾಮಗಾರಿ ನಡೆಯುತ್ತಿದ್ದು,ಯೋಜನೆ ಜಾರಿಗೆ ಬಂದರೆ ನಾಲಾ ವಲಯದ ಇತರೆ ತಾಲೂಕುಗಳಿಗೆ ಕುಡಿಯುವ ನೀರು ಇಲ್ಲದಂತಾಗುತ್ತದೆ. ಹಾಗಾಗಿ ‘ನಮ್ಮ ನೀರು, ನಮ್ಮ ಹಕ್ಕು’ ಎಂಬ ಭಾವನೆಯಿಂದ ಜಿಲ್ಲೆಯ ಜನರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.

ಮಾಗಡಿ ತಾಲೂಕಿನ ಶ್ರೀರಂಗ ಏತ ನೀರಾವರಿಗೆ ಸೋರ್ಸ್ ಆಗಿ ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ ೩ ಟಿಎಂಸಿ ಹೇಮಾವತಿ ನೀರನ್ನು ಬಳಕೆ ಮಾಡಲು ರಾಜಕೀಯ ದುರುದ್ದೇಶದಿಂದ ಯೋಜನೆಯನ್ನು ರೂಪಿಸಲಾಗಿದೆ. ಹೇಮಾವತಿ ನಾಲೆಯ ೭೦ ಕಿಮೀಯಿಂದ ಡಿ.ರಾಮಪುರದಿಂದ ನಾಲೆಯನ್ನು ಡೈವರ್ಟ್ ಮಾಡಿ ಕುಣಿಗಲ್ ಬಳಿ ಇರುವ ನಾರನಹಳ್ಳಿಯ ಹಾಲಿ ನಾಲಾ ೧೯೭ ಕಿಮೀಗೆ ಸೇರಿಸುವ ಸುಮಾರು ೩೫ ಕಿಮೀ ಉದ್ದ ವ್ಯಾಪ್ತಿಯ ಯೋಜನೆ ಇದಾಗಿದ್ದು, ಈಗಾಗಲೇ ಸರಕಾರಿ ಭೂಮಿಯಲ್ಲಿ ಪೈಫ್‌ಲೈನ್ ಅಳವಡಿಸಲು ಕಾಮಗಾರಿ ಆರಂಭವಾಗಿದೆ. ಇದರಿಂದ ಗುಬ್ಬಿ,ಮಧುಗಿರಿ, ಕೊರಟಗೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ ತಾಲೂಕುಗಳಲ್ಲದೆ, ಸುಮಾರು ೨೭ ಏತ ನೀರಾವರಿ ಯೋಜನೆಗಳಿಗೆ ನೀರಿನ ಕೊರತೆ ಉಂಟಾಗಲಿದೆ. ಈಗಲೇ ತಡೆಯದಿದ್ದರೆ ಮುಂದೆ ದೊಡ್ಡ ಅನಾಹುತಕ್ಕೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಎಚ್.ನಿಂಗಪ್ಪ ತಿಳಿಸಿದ್ದಾರೆ.

ಎಕ್ಸ್ಪ್ರೆಸ್ ಕೆನಾಲ್ ಮೂಲಕ ಮಾಗಡಿಗೆ ಹೇಮಾವತಿ ನೀರನ್ನು ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ರದ್ದುಪಡಿಸಬೇಕು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಲಾಗಿದೆ. ಅಲ್ಲದೇ ಸದನದಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಎಕ್ಸ್ಪ್ರೆಸ್ ಕೆನಾಲ್‌ಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಜಿಲ್ಲೆಯ ಶಾಸಕರಾದ ಎಂ.ಟಿ.ಕೃಷ್ಣಪ್ಪ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಅವರೂ ಮತ್ತೊಮ್ಮೆ ಜಿಲ್ಲೆಯ ಮಂತ್ರಿಗಳು ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ, ಇರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರೂ ನೀತಿ ಸಂಹಿತೆ ಜಾರಿ ಇರುವುದನ್ನು ನೆಪ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕೆ ಇಡೀ ಜಿಲ್ಲೆಯಾದ್ಯಂತ ಜನರು ವಿರೋಧ ವ್ಯಕ್ತಪಡಿಸುತಿದ್ದು, ಸರಕಾರ ಯೋಜನೆಯನ್ನು ತಕ್ಷಣ ರದ್ದುಪಡಿಸದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್.ನಿಂಗಪ್ಪ ನುಡಿದರು.

ಹೇಮಾವತಿ ಯೋಜನೆಯ 72 ಕಿಮೀಯಿಂದ 197 ಕಿಮೀವರೆಗೆ ನಾಲೆಯ ಆಧುನೀಕರಣ ಕಾಮಗಾರಿ ಕೊನೆಯ ಹಂತದಲ್ಲಿದೆ. ಇದಕ್ಕಾಗಿ ಸರಕಾರ ಸುಮಾರು 900 ಕೋಟಿ ರು.ಗಳನ್ನು ಖರ್ಚು ಮಾಡುತ್ತಿದೆ. ಇದೇ ನಾಲೆಯಿಂದ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದು. ಏಕ್ಸಪ್ರೆಸ್ ಕೆನಾಲ್‌ನ ಅಗತ್ಯವಿಲ್ಲ.ಇದನ್ನು ಸರಕಾರ ಮತ್ತು ಯೋಜನೆಯ ಹಿಂದಿರುವ ಜನಪ್ರತಿನಿಧಿಗಳು ಅರ್ಥ ಮಾಡಿಕೊಂಡು ತುಮಕೂರು ಜಿಲ್ಲೆಯ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,ಗೂಳೂರು ನವೀನ್‌ಗೌಡ, ನಾಗವಲ್ಲಿ ರಾಮಣ್ಣ, ಹೆಬ್ಬೂರು ಗೋವಿಂದರಾಜು,ಉರ್ಡಿಗೆರೆ ಲಕ್ಷ್ಮೀನಾರಾಯಣ, ಲೋಕೇಶ್, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.