ಸಾರಾಂಶ
ಕುಕನೂರು: ಯುವ ಶಕ್ತಿಯೇ ರಾಷ್ಟ್ರದ ಸಂಪತ್ತು ಎಂದು ಸ್ವಾಮಿ ವಿವೇಕಾನಂದರು ಹೇಳಿದ ವಾಣಿ ಯುವ ಜನತೆಯಲ್ಲಿ ರಾಷ್ಟ್ರ ಪ್ರೇಮವನ್ನು ಸದೃಢಗೊಳಿಸುತ್ತದೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ಉಪ್ಪಾರ ಹೇಳಿದರು.ತಾಲೂಕಿನ ಮಂಗಳೂರು ಗ್ರಾಮದ ಸಿದ್ದಲಿಂಗನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆಯನುದ್ದೇಶಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಭಾರತದ ಪ್ರಭಾವಶಾಲಿ ಪ್ರಸಿದ್ಧ ತತ್ವಜ್ಞಾನಿಯಾಗಿದ್ದರು. ನಿರ್ಭಯತೆ, ಆಶಾವಾದ, ಸಮಾಜದ ಸರ್ವರ ಸಮಸ್ಯೆಗಳಿಗೆ ಸ್ಪಂದಿಸುವ ಅಪ್ಪಟ ದೇಶಭಕ್ತರಾಗಿದ್ದರು. ಸದೃಢ ಆರೋಗ್ಯ, ಸದೃಢ ಮನಸ್ಸು ಹಾಗೂ ಉಕ್ಕಿನ ನರನಾಡಿಯುಳ್ಳ ದೇಶಭಕ್ತ ಯುವಕ ಯುವತಿಯರನ್ನು ನನಗೆ ಕೊಡಿ ಭಾರತವನ್ನು ನಾನು ವಿಶ್ವಗುರುವನ್ನಾಗಿ ಮಾಡುತ್ತೇನೆ. ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ಮೂಢನಂಬಿಕೆ, ಧರ್ಮಾಂಧತೆ, ಮೇಲು-ಕೀಳು, ಜಾತಿ ಭೇದ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ. ಭಾರತದ ಸಂಸ್ಕೃತಿ ಆಚಾರ ವಿಚಾರಗಳನ್ನು ಸರ್ವರಿಗೂ ಕಲಿಸುತ್ತೇನೆ ಎಂದು ಹೇಳಿದ ಸ್ವಾಮಿ ವಿವೇಕಾನಂದರ ಮಾತುಗಳನ್ನು ಒಮ್ಮೆಮನದಟ್ಟು ಮಾಡಿಕೊಳ್ಳಬೇಕು ಎಂದರು.ಸರ್ಕಾರಿ ಉರ್ದು ಶಾಲೆಯ ಮುಖ್ಯೋಪಾಧ್ಯಾಯ ಕೊಟ್ರಯ್ಯ ಕಟಿಗಿಮಠ ಮಾತನಾಡಿ, ಸ್ವಾಮಿ ವಿವೇಕಾನಂದರು ಅಪ್ರತಿಮ ದೇಶ ಭಕ್ತ. ಅವರ ತತ್ವ ಸಿದ್ಧಾಂತ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ದೇಶದ ಸರ್ವತೋಮುಖ ಏಳಿಗೆಗೆ ಶ್ರಮಿಸೋಣ ಎಂದರು. ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳಿದ್ದರು.