ಕಳಸಾ-ಬಂಡೂರಿಗೆ ಆಗ್ರಹಿಸಿ ಒನಕೆ ಹೋರಾಟ

| Published : Oct 19 2024, 12:31 AM IST / Updated: Oct 19 2024, 12:32 AM IST

ಸಾರಾಂಶ

ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿ ಕಳಸಾ-ಬಂಡೂರಿ ನಾಲಾ, ಮಲಪ್ರಭಾ ನದಿ ಜೋಡಣಾ ಯುವ ಹೋರಾಟ ಕೇಂದ್ರ ಸಮಿತಿ, ನರಗುಂದ ಮಹಿಳಾ ಹೋರಾಟ ರಾಜ್ಯ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಒನಕೆ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿ ಕಳಸಾ-ಬಂಡೂರಿ ನಾಲಾ, ಮಲಪ್ರಭಾ ನದಿ ಜೋಡಣಾ ಯುವ ಹೋರಾಟ ಕೇಂದ್ರ ಸಮಿತಿ, ನರಗುಂದ ಮಹಿಳಾ ಹೋರಾಟ ರಾಜ್ಯ ಸಮಿತಿ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಒನಕೆ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು ಒನಕೆ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಉತ್ತರ ಕರ್ನಾಟಕ ನಾಗರಿಕರ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲೇ ಪರಿಹರಿಸಲು ತುರ್ತಾಗಿ ಕಾಮಗಾರಿ ಆರಂಭಿಸಬೇಕು. ಕಣಕುಂಬಿ ಭಾಗದಲ್ಲಿ ಕಳಸಾ-ಬಂಡೂರಿ ನಾಲೆಯ ನೀರು ಹೇರಳವಾಗಿದೆ. ಈ ನೀರನ್ನು ಬಳಸದೆ ವ್ಯರ್ಥವಾಗುತ್ತಿದೆ. ಕಳೆದ 60 ವರ್ಷಗಳಿಂದ ಈ‌ ಯೋಜನೆ ಅನುಷ್ಠಾನಗೊಳಿಸುವಂತೆ ಹೋರಾಟ ನಡೆಸಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಳಸಾ-ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಅನುಷ್ಠಾನ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಇಲ್ಲಿಯವರೆಗೂ ಬಾರಕೋಲ ಚಳವಳಿ ಮೂಲಕ ಹೋರಾಟ ಮಾಡಿದ್ದೆವು. ಈಗ ಬಾರಕೋಲು ಜೊತೆಗೆ ಒನಕೆ ಹೋರಾಟ ನಡೆಸಲಾಗುವುದು ಎಂದರು.

ತ್ರಿವೇಣಿ ಪಟಾತ ಮಾತನಾಡಿ, ಕಳಸಾ-ಬಂಡೂರಿ ಯೋಜನೆ ಕಳೆದ 60 ವರ್ಷಗಳಿಂದ ಬಾಕಿ ಇದೆ. ಗೋವಾ ಸರ್ಕಾರ ಈ ನೀರನ್ನು ಬಳಸಲು ಯಾವುದೇ ಯೋಜನೆ ರೂಪಿಸಿಲ್ಲ ಎಂದು ಆರೋಪಿಸಿದರು.