ಸಾರಾಂಶ
ಗ್ರಾಮೀಣಾಭಿವೃದ್ಧಿ ಸಚಿವರ ಭರವಸೆ ಮೇರೆಗೆ ಧರಣಿ ತಾತ್ಕಾಲಿಕ ಹಿಂಪಡೆತಕನ್ನಡಪ್ರಭ ವಾರ್ತೆ ರಾಮನಗರ
ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ನೀರು ಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಗ್ರಾಮೀಣಾಭಿವೃದ್ಧಿ ಸಚಿವರು ಈಡೇರಿಸದಿದ್ದರೆ ಹೋರಾಟ ಮುಂದುವರೆಸುವುದಾಗಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಎಚ್ಚರಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ನೀಡಿದ ಆಶ್ವಾಸನೆ ಮೇರೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಫೆ.22ರಂದು ಹಮ್ಮಿಕೊಂಡಿದ್ದ ಬೃಹತ್ ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು, ಮೂರರಿಂದ ನಾಲ್ಕು ತಿಂಗಳೊಳಗೆ ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಪಂಚಾಯತ್ ರಾಜ್ ಆಯುಕ್ತಾಲಯದಿಂದ ಗ್ರಾಪಂ ಸಿಬ್ಬಂದಿ ವೇತನವನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಇ - ಹಾಜರಾತಿ ವಿವರಗಳನ್ನು ದಾಖಲಿಸಿ ಗ್ರಾಪಂ ಸಿಬ್ಬಂದಿಗಳ ವೇತನ ಪಾವತಿಸುವಂತೆ ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಬಹುತೇಕ ಗ್ರಾಪಂ ನೌಕರರಿಗೆ 2024ರ ಜನವರಿ ತಿಂಗಳ ವೇತನದಲ್ಲಿ 1 ರಿಂದ 20 ದಿನಗಳ ವೇತನ ಕಡಿತವಾಗಿದೆ.ಬಹುತೇಕ ಗ್ರಾಪಂಗಳಲ್ಲಿ ಸರ್ವರ್ ತೊಂದೆರೆಯಿದೆ. ವಿದ್ಯುತ್ ಇಲ್ಲದಿರುವುದು, ಕಂಪ್ಯೂಟರ್ ಕೆಟ್ಟಿರುವುದು, ಚರ್ಮ ರೋಗವಿರುವ ನೌಕರರ ಬಯೋಮೆಟ್ರಿಕ್ ತಂತ್ರಾಂಶದಲ್ಲಿ ತೆಗೆದುಕೊಳ್ಳದಿರುವುದು, ಬಯೋಮೆಟ್ರಿಕ್ ನೀಡಲು ಮೊಬೈಲ್ ಅವಕಾಶ ಕಲ್ಪಿಸದಿರುವುದು, ರಜೆ ದಿನಗಳನ್ನು ಪರಿಗಣಿಸದಿರುವುದು ಮತ್ತು ವಾಟರ್ ಮ್ಯಾನ್ ಗಳು ಭಾನುವಾರ ಮತ್ತು ರಜಾ ದಿನಗಳಲ್ಲೂ ಕೆಲಸ ನಿರ್ವಹಿಸುತ್ತಾರೆ. ಹೀಗೆ ಅನೇಕ ತೊಂದರೆಗಳಿಂದ ಜನವರಿ ತಿಂಗಳ ವೇತನ ಕೆಲಸ ಮಾಡಿದರೂ ಪಾವತಿಯಾಗಿಲ್ಲ. ಆದ್ದರಿಂದ ಬಯೋಮೆಟ್ರಿಕ್ ಇ - ಹಾಜರಾತಿಯ ಲೋಪದೋಷಗಳನ್ನು ಸರಿಪಡಿಸುವವರೆಗೆ ಸಿಬ್ಬಂದಿಯ ಪೂರ್ಣ ವೇತನ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವರು, ಇಲಾಖಾ ಅಧಿಕಾರಿಗಳು ಮತ್ತು ಸಂಘದ ಜೊತೆ ಎರಡು ಬಾರಿ ಸಭೆ ಸೇರಿ ಬೇಡಿಕೆಗಳ ಬಗ್ಗೆ ಚರ್ಚೆ ನಡೆದಿದೆ. ಮೂರು ವರ್ಷಗಳ ಹಿಂದೆ ಪಿಂಚಣಿ ನೀಡಲು ಒಂದು ಸಮಿತಿ ರಚನೆಯಾಗಿದ್ದು, ಆ ಬಗ್ಗೆ ಚರ್ಚೆಯಾಗಿ ವರದಿಯನ್ನು ಆರ್ಥಿಕ ಇಲಾಖೆಗೆ ಕಳುಹಿಸಲಾಗಿದೆ. ಆ ಕಡತ ಪರಿಶೀಲಿಸಿ ಪಿಂಚಣಿಯನ್ನು ಜಾರಿ ಮಾಡಬೇಕೆಂದು, ಆರೋಗ್ಯದ ಸಮಸ್ಯೆ ತೀವ್ರವಾಗಿರುವ ಕಾರಣ ಆರೋಗ್ಯ ಸೌಲಭ್ಯವನ್ನು ಜೋಡಿಸಿ ಕಾರ್ಪಸ್ ಫಂಡನ್ನು ಹೊಂದಿಸಿ ಪರಿಗಣಿಸಬೇಕೆಂದು ಒಂದು ಕಮಿಟಿ ರಚನೆಯಾಗಿದೆ.ಈಗಾಗಲೇ ಸಂಘದ ಜೊತೆ ಎರಡು ಬಾರಿ ಸಭೆ ನಡೆದಿದ್ದು, ಆ ವರದಿಯನ್ನು ಅಂತಿಮಗೊಳಿಸಿ ವೇತನ ಹೆಚ್ಚಳ ಮಾಡಬೇಕೆಂದು ಹಾಗೂ ಕನಿಷ್ಠ ವೇತನದ ಬಗ್ಗೆ ಚರ್ಚೆ ನಡೆದು ಮೂಲ ವೇತನವನ್ನು ಹೆಚ್ಚಳ ಮಾಡುವ ಬಗ್ಗೆ ಕಾರ್ಮಿಕ ಇಲಾಖೆಗೆ ಕಡತ ಕಳುಹಿಸಲು ಸಹ ಚರ್ಚೆಯಾಗಿದೆ. ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಕರ ವಸೂಲಿಗಾರರು ಶೇ.7ರಿಂದ 8ರಷ್ಟು ಕರ ವಸೂಲಿ ಮಾಡದಿದ್ದರೆ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪಂಚಾಯಿತಿಗಳಲ್ಲಿ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪಿಡಿಒಗಳು ತೆರಿಗೆ ಬಾಕಿ ಇರುವವರ ಮೇಲೆ ಸೂಕ್ತ ಕ್ರಮ ವಹಿಸುವ ನೋಟಿಸ್ ಜಾರಿ ಮಾಡುವುದಿಲ್ಲ. ದೊಡ್ಡವರ ಪ್ರಭಾವಕ್ಕೆ ಮಣಿದು ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಸೂಕ್ತ ಕಾನೂನು ಕ್ರಮ ವಹಿಸುವ ಹಾಗೂ ಅರಿವು ಮೂಡಿಸುವ ಕೆಲಸ ಆಗಬೇಕು. ಕರ ವಸೂಲಿಗಾರರನ್ನು ತೆರಿಗೆ ವಸೂಲಿ ಕಾರ್ಯಕ್ಕೆ ನಿಗದಿತವಾಗಿ ಒಳಪಡಿಸುವುದರ ಮೂಲಕ ತೆರಿಗೆ ಸಂಗ್ರಹಕ್ಕೆ ಹೆಚ್ಚು ಒತ್ತು ನೀಡಬೇಕೆಂದು ರಾಮಕೃಷ್ಣಯ್ಯ ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್, ಮುಖಂಡರಾದ ಜಯಲಿಂಗು, ಪ್ರಸಾದ್, ಸುರೇಶ್, ರಾಜಶೇಖರ್, ನರಸಿಂಹಮೂರ್ತಿ, ನಾಗರಾಜು, ಶೇಖರ್ ಇತರರಿದ್ದರು.
ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.