ವಿದ್ಯಾರ್ಥಿಗಳು ಶಿಸ್ತು - ಶ್ರದ್ಧೆ ಅಳವಡಿಸಿಕೊಳ್ಳಿ: ಸ್ವಾಮೀಜಿ

| Published : Feb 01 2024, 02:02 AM IST

ವಿದ್ಯಾರ್ಥಿಗಳು ಶಿಸ್ತು - ಶ್ರದ್ಧೆ ಅಳವಡಿಸಿಕೊಳ್ಳಿ: ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಸಾಹಸಿಯ ಬದುಕಲ್ಲಿ ಶಿಸ್ತಿರುತ್ತೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಅಳವಡಿಸಿಕೊಂಡಲ್ಲಿ ಅದ್ಭುತಗಳನ್ನು ಸೃಷ್ಟಿಸುವವರ ಪಟ್ಟಿಯಲ್ಲಿ ನೀವಿರುತ್ತೀರಿ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕುದೂರು: ಸಾಹಸಿಯ ಬದುಕಲ್ಲಿ ಶಿಸ್ತಿರುತ್ತೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಅಳವಡಿಸಿಕೊಂಡಲ್ಲಿ ಅದ್ಭುತಗಳನ್ನು ಸೃಷ್ಟಿಸುವವರ ಪಟ್ಟಿಯಲ್ಲಿ ನೀವಿರುತ್ತೀರಿ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕುದೂರು ಮಾಧ್ಯಮ ಬಳಗಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕುದೂರು, ಸೋಲೂರು ಮತ್ತು ತಿಪ್ಪಸಂದ್ರ ಹೋಬಳಿಯ ಹತ್ತನೇ ತರಗತಿ ಮಕ್ಕಳಿಗೆ ಪರೀಕ್ಷಾ ಸಿದ್ದತೆ ಕುರಿತು ಆತ್ಮಶಕ್ತಿ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಯಾವುದೇ ಕಲಿಕೆಗೆ ಶಿಸ್ತೇ ಮಾನದಂಡವಾಗಿರುತ್ತದೆ. ಯಾರು ಶಿಸ್ತನ್ನು ಗೌರವಿಸುತ್ತಾರೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ವಿದ್ಯಾರ್ಥಿಗಳ ಮನಸ್ಸು ಮಲ್ಲಿಗೆ ಬುಟ್ಟಿಯಾಗಿರಬೇಕೆ ಹೊರತು, ಕಸದ ತೊಟ್ಟಿಯಾಗಿರಬಾರದು. ವಿದ್ಯಾರ್ಥಿಗಳ ಜೀವನದಲ್ಲಿ ಪ್ರಯತ್ನವೇ ಅನುಭವಾಮೃತವವನ್ನು ಕೊಡುವುದು, ಪ್ರಯುತ್ನವೇ ಪರಮೇಶ್ವರ ಎಂದರು.

ಯಶಸ್ಸು ಉಚಿತ ಕೊಡುಗೆಯಲ್ಲ:

ಯಶಸ್ಸು ಎನ್ನುವುದು ಉಚಿತ ಕೊಡುಗೆಯಲ್ಲ. ಅದು ಪರಿಶ್ರಮದ ಫಲ. ನಿಮ್ಮ ಯಶಸ್ಸೇ ನಿಮ್ಮ ವ್ಯಕ್ತಿತ್ವದ ಫಲ, ಸಾಮಾನ್ಯ ಮನಸನ್ನು ಪರಿಶ್ರಮದ ಮೂಲಕ ಎತ್ತರಕ್ಕೆ ಕರೆದುಕೊಂಡು ಹೋಗುವುದೇ ನಿಜವಾದ ಪವಾಡ. ಅಂತಹ ಶಕ್ತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಂದಿರುತ್ತಾನೆ. ಅದನ್ನು ಗುರುತಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ತೊರೆರಾಮನಹಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಪರಮಾನಂದ ಸ್ವಾಮೀಜಿ ಮಾತನಾಡಿ, ಯಶಸ್ಸು ಎನ್ನುವುದು ಸೋಮಾರಿಯ ಸ್ವತ್ತಲ್ಲ. ಜಗತ್ತಿನ ಯಾವುದೇ ಯಶಸ್ವಿ ವ್ಯಕ್ತಿಯನ್ನು ಕೇಳಿನೋಡಿ ಅವನೊಳಗೊಬ್ಬ ಕಠಿಣ ಪರಿಶ್ರಮಿ ಇರುತ್ತಾನೆ. ಆತನ ಬದುಕಿನಲ್ಲಿ ವ್ಯವಸ್ಥಿತವಾದ ಶ್ರದ್ದೆ ಮತ್ತು ಶಿಸ್ತಿರುತ್ತದೆ. ಕನಸು ಕಾಣುವುದು ಮುಖ್ಯವಲ್ಲ. ಕಂಡ ಕನಸಿನ ಹಿಂದೆ ಓಡಬೇಕು. ಅದನ್ನು ನನಸು ಮಾಡಿಕೊಳ್ಳಬೇಕು. ಇಂತಹ ಮನಸ್ಥಿತಿಯಲ್ಲಿ ಮುನ್ನಡೆದ ಯಾವುದೇ ವಿದ್ಯಾರ್ಥಿ ಬದುಕಿನಲ್ಲಿ ಹಿಂದುಳಿಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಇಡೀ ಜಗತ್ತಿನ ವಿದ್ಯಮಾನಗಳನ್ನು ನೋಡುವ ಮತ್ತು ಅದರ ಬಗ್ಗೆ ಚರ್ಚಿಸುವ ವಿದ್ಯಾರ್ಥಿಗಳಿಗೆ ಕೇವಲ ಆರು ವಿಷಯಗಳನ್ನು ಓದಿ ನೆನಪಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರೆ ವಿದ್ಯಾರ್ಥಿಗಳ ಅಭ್ಯಾಸ ಕ್ರಮದಲ್ಲಿ ಏನೋ ತಪ್ಪಾಗಿದೆ ಎಂದೇ ಅರ್ಥ. ಆ ತಪ್ಪನ್ನು ಗುರುತಿಸಿಕೊಂಡು ಸರಿಮಾಡಿಕೊಂಡು ಮನ್ನಡೆದರೆ ಗೆಲುವು ನಿಮ್ಮದು ಎಂದು ಹೇಳಿದರು.

ಕರ್ನಾಟಕ ಪಬ್ಲಿಕ್ ಶಾಲೆ ಉಪಪ್ರಾಚಾರ್ಚರಾದ ಶ್ರೀದೇವಿ ಮಾತನಾಡಿ, ಇಂತಹ ವ್ಯಕ್ತಿತ್ವ ವಿಕಸದನ ತರಗತಿಗಳು ಆಗಾಗ್ಗೆ ಶಾಲೆಗಳಲ್ಲಿ ನಡೆಯಬೇಕು. ಸ್ವಾತಿ ಮಳೆಯ ಹನಿಗಾಗಿ ಬಾಯಿ ತೆರೆದು ಕುಳಿತ ಕಪ್ಪೆ ಚಿಪ್ಪಿನಂತೆ, ಸ್ಪೂರ್ತಿಯ ಸನ್ನಿವೇಶಕ್ಕೆ ಪ್ರತಿ ವಿದ್ಯಾರ್ಥಿ ಹಂಬಿಲಿಸುತ್ತಿರುತ್ತಾನೆ. ಅಂತಹ ಸ್ಪೂರ್ತಿ ಇಂತಹ ಕಾರ್ಯಕ್ರಮ ನೀಡುತ್ತದೆ ಎಂದರು.

ಗ್ರಾಪಂ ಅಧ್ಯಕ್ಷೆ ಕುಸುಮಾ, ಸದಸ್ಯೆ ಲತಾ, ಶಿಕ್ಷಣ ಇಲಾಖೆಯ ಅಧಿಕಾರಿ ಗಂಗಾಧರ್, ಶಿಕ್ಷಕ ಶಿವಣ್ಣ, ಮಂಜುನಾಥ್, ರಾಮಸ್ವಾಮಿ, ಯುವಮುಖಂಡ ಜಗದೀಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪದ್ಮನಾಭ್, ಸರಸ್ವತಿ, ಕುಸುಮಾ ಉಪಸ್ಥಿತರಿದ್ದರು.31ಕೆಆರ್ ಎಂಎನ್ 1,2.ಜೆಪಿಜಿ

ಕುದೂರು ಕೆಪಿಎಸ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಾಧ್ಯಮ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಹತ್ತನೇ ತರಗತಿ ಮಕ್ಕಳ ಪರೀಕ್ಷಾ ಸಿದ್ದತೆ ಕಾರ್ಯಕ್ರಮದಲ್ಲಿ ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮತ್ತು ಶ್ರೀ ಪರಮಾನಂದ ಸ್ವಾಮೀಜಿ ಭಾಗವಹಿಸಿದ್ದರು.