ಸಾರಾಂಶ
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಿದೇಶಿ ಪ್ರವಾಸ ಭಾಗ್ಯ
ತುಮಕೂರು: ರಾಷ್ಟ್ರಮಟ್ಟದ ವಿಶ್ವವಿದ್ಯಾನಿಲಯಗಳ ಶಿಕ್ಷಣದ ಸ್ವರೂಪವನ್ನು ಅಧ್ಯಯನ ಮಾಡಲು ವರ್ಷಕ್ಕೊಮ್ಮೆ ಎರಡು ತಂಡಗಳಂತೆ ಪದವಿ ವಿದ್ಯಾರ್ಥಿಗಳ ಒಂದು ತಂಡ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಹಾಗೂ ಸ್ನಾತಕೋತ್ತರ ಪದವಿಯ ತಂಡ ಇಂಗ್ಲೆಂಡ್‌ನ ಸೌತ್ ವೇಲ್ಸ್ ವಿಶ್ವವಿದ್ಯಾನಿಲಯಕ್ಕೆ 3 ವಾರಗಳ ಭೇಟಿ ನೀಡಿ ಶೈಕ್ಷಣಿಕವಾಗಿ ಹಾಗೂ ಸಂಶೋಧನೆಯ ಪ್ರಗತಿಯ ಪ್ರವೃತ್ತಿಗಳನ್ನು ತಿಳಿಯಲಿದೆ ಎಂದು ತುಮಕೂರು ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಗಣಿತ ಶಾಸ್ತ್ರ ವಿಭಾಗವು ವಿವಿ ವಿಜ್ಞಾನ ಕಾಲೇಜು, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಆಯೋಜಿಸಿದ್ದ ‘ಅನ್ವಯಿಕ ಗಣಿತಶಾಸ್ತ್ರದಲ್ಲಿನ ಪ್ರಗತಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯ ಅವಶ್ಯಕತೆಯಿದೆ. ಅನ್ವಯಿಕ ವಿಷಯಗಳನ್ನು ಸ್ವೀಕರಿಸುವ, ಅಭ್ಯಾಸ ಮಾಡುವ ಮನೋಭಾವ ಪ್ರಾಧ್ಯಾಪಕರಲ್ಲಿ ಬಂದರೆ ವಿದ್ಯಾರ್ಥಿಗಳಲ್ಲಿ ತಾನಾಗಿಯೇ ಬೆಳೆಯುತ್ತದೆ ಎಂದರು.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರದೀಪ್ ಜಿ. ಸಿದ್ದೇಶ್ವರ್ ಮಾತನಾಡಿ, ಎಲ್ಲವನ್ನೂ ನಾವೇ ಕಲಿಯಲು ಸಾಧ್ಯವಿಲ್ಲ. ಕಲಿತರೂ ಸಂಪೂರ್ಣ ಅರ್ಥವಾಗುವುದಿಲ್ಲ. ಅರ್ಥವಾದರೂ ಎಲ್ಲರ ದೃಷ್ಟಿಕೋನಕ್ಕೆ ಹೊಂದಾಣಿಕೆಯಾಗುವುದಿಲ್ಲ. ಈ ಸಮಾನ ಮನಸ್ಥಿತಿಯನ್ನು ತಲುಪಲು ಸಮ್ಮೇಳನಗಳ, ಕಾರ್ಯಾಗಾರಗಳ ಅವಶ್ಯಕತೆಯಿದೆ ಎಂದು ಹೇಳಿದರು.ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ದೇಶ-ವಿದೇಶಗಳಿಂದ 40 ಸಂಶೋಧನಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ನರಹರಿ ಎನ್., ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಟ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ತಿರುಪತಿಗುಡಿ, ತುಮಕೂರುವಿವಿ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಪಾಟೀಲ್ ಮಲ್ಲಿಕಾರ್ಜುನ್ ಬಿ., ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರಾಲಿ ಬೈಷ್ಯ, ಡಾ. ಬೋರೇಗೌಡ ಎಚ್.ಎಸ್. ಇದ್ದರು.