ಸಾರಾಂಶ
ಗದಗ: ವಿದ್ಯಾರ್ಥಿಗಳೇ ನಮ್ಮ ದೇಶದ ಭವ್ಯ ಭವಿಷ್ಯವಾಗಿದ್ದಾರೆ. ಓದುವ ಹಂತದಲ್ಲಿ ಉತ್ತಮವಾಗಿ ಅಧ್ಯಯನ ಮಾಡಿ ಜೀವನದಲ್ಲಿ ಯಶಸ್ಸು ನಿಮ್ಮದಾಗಿಸಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.ತಾಲೂಕಿನ ಮಲ್ಲಸಮುದ್ರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪಪೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶನಿವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರಿಂದ ಆಯೋಜಿಸಲಾದ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗುದು ಬಹುಮಾನ ವಿತರಿಸಿ ಅವರು ಮಾತನಾಡಿದರು.
ಭಾರತದ ಭವ್ಯ ಭವಿಷ್ಯ ನಿರ್ಮಾಣದಲ್ಲಿ ಇಂದಿನ ಯುವ ಪೀಳಿಗೆ ವಿದ್ಯಾರ್ಥಿಗಳ ಪಾತ್ರ ಅಪಾರವಿದೆ. ಸರ್ಕಾರ ಹಲವು ಸೌಲಭ್ಯ ಒದಗಿಸಿದೆ. ಕಲಿಯುವ ಅವಧಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜ್ಞಾನ ಹೊಂದಿ ಎಂದರು.ಮೊರಾರ್ಜಿ ದೇಸಾಯಿಯವರು ಇಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಗಳಾಗಿ ಆರ್ಥಿಕ ಸಚಿವರಾಗಿ ಅಲ್ಲದೆ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮ ಆಡಳಿತ ಅವಧಿಯಲ್ಲಿ ಅನೇಕ ಮಹತ್ವದ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಸುಭದ್ರ ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಮೊರಾರ್ಜಿ ದೇಸಾಯಿಯವರು ಎಂದಿಗೂ ಅಧಿಕಾರಕ್ಕಾಗಿ ಹಪಾಹಪಿಸಿದವರಲ್ಲ ಅವರ ಜೀವನ ಬದುಕುವ ಶೈಲಿ ಮೂಲಕ ಅಧಿಕಾರ ಅವರನ್ನು ಹುಡುಕಿಕೊಂಡು ಬಂದಿತ್ತು. ಅಂತ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಶಾಲಾ-ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಓದುವ ಮೂಲಕ ಸಾಧನೆ ನಿಮ್ಮದಾಗಿಸಿಕೊಳ್ಳಿ ಎಂದರು.2024-25ನೇ ಸಾಲಿನಲ್ಲಿ ಮಲ್ಲಸಮುದ್ರ ಶಾಲೆಯಲ್ಲಿ 80 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆಯುವ ಮೂಲಕ ಸರ್ಕಾರದ 10,000 ಗಳ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಅಲ್ಲದೆ ಶೇ.100ರಷ್ಟು ಫಲಿತಾಂಶ ಪಡೆದಿದ್ದು ಅಭಿನಂದನೀಯ ಎಂದರು.
ರಾಜ್ಯದ ಕ್ರೈಸ್ ಸಂಸ್ಥೆಯ ಅಡಿ 78 ಕಾಲೇಜುಗಳಿದ್ದು, ಉತ್ತಮ ಫಲಿತಾಂಶದಲ್ಲಿ ಮಲ್ಲಸಮುದ್ರದ ಕಾಲೇಜು ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿರುವುದು ಹೆಮ್ಮೆಪಡುವ ವಿಷಯ. ಮುಂದಿನ ವರ್ಷ ಇಲ್ಲಿ ಕಲಿಯುವ ಎಲ್ಲ ಮಕ್ಕಳು ಸಹ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣವಾಗಬೇಕು, ಈ ನಿಟ್ಟಿನಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಕಾರ್ಯನಿರ್ವಹಿಸುವಂತಾಗಲಿ ಎಂದರು.ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ಯಶಸ್ಸಿಗೆ ನಿರಂತರವಾಗಿ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಯಶಸ್ಸು ನಿಮ್ಮದಾಗಲಿದೆ ಜೊತೆಗೆ ಜೀವನದಲ್ಲಿಯೂ ಸಹ ಸಾಧನೆ ಸಾಧ್ಯ. ಶೇ.85ಕ್ಕಿಂತ ಅಧಿಕ ಫಲಿತಾಂಶ ಪಡೆಯುವದು ಸಣ್ಣ ಮಾತಲ್ಲ ಎಲ್ಲರೂ ಉತ್ತಮ ಸಾಧನೆಗೈದಿದ್ದೀರಿ, ಇದಕ್ಕೆ ಕಾರಣರಾದ ಎಲ್ಲಾ ಬೋಧಕ ಬೋಧಕೀಯತರ ಸಿಬ್ಬಂದಿಗಳಿಗೂ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಉತ್ತಮ ಪಲಿತಾಂಶಕ್ಕೆ ಕಾರಣರಾದ ಬೋಧಕ ಸಿಬ್ಬಂದಿಗಳಿಗೆ ಸಚಿವರು ಸನ್ಮಾನಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ರವಿ ಗುಂಜಿಕರ, ಸಿದ್ದು ಪಾಟೀಲ ಸೇರಿದಂತೆ ಪ್ರಾಚಾರ್ಯರು, ಅಸುಂಡಿ ಗ್ರಾಪಂ ಅಧ್ಯಕ್ಷರು, ಬೋಧಕೆತರ ಸಿಬ್ಬಂದಿ ಇದ್ದರು.