ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನ.28 ರಿಂದ ಡಿ.6 ರವರೆಗೆ ರಾಜ್ಯಾದ್ಯಂತ ನಡೆಯಲಿರುವ ನಶೆಮುಕ್ತ ಅಭಿಯಾನದ ಪೋಸ್ಟರ್‌ನ್ನು ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಬಿಡುಗಡೆಗೊಳಿಸಿದರು. ಈ ವೇಲೆ ಮಾತನಾಡಿದ ಸಚಿನ್ ಕುಳಗೇರಿ, ಭಾರತ ತನ್ನದೇ ಘನತೆ ವೈಶಿಷ್ಟತೆ, ಗೌರವ ಆಚರಣೆ ಹಾಗೂ ಸದ್ವಿಚಾರ ಹೊಂದಿದ ದೇಶ. ಹೀಗಾಗಿ, ಶತಮಾನಗಳಿಂದ ಇನ್ನಿತರ ದೇಶಗಳಿಗೆ ಮಾರ್ಗದರ್ಶನ ಶಿಕ್ಷಣ, ಕೌಶಲ್ಯ ಹಾಗೂ ಉತ್ತಮ ವ್ಯಕ್ತಿಗಳನ್ನು ನೀಡುತ್ತಲೇ ಇದೆ. ವಿದೇಶಗಳಲ್ಲಿ ನಮ್ಮ ದೇಶದ ಯುವಕರು ದೊಡ್ಡ ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ಇತ್ತೀಚೆಗೆ ಸಂಸತ್ತಿನ ಸ್ಥಾಯಿ ಸಮಿತಿಯೊಂದು ನೀಡಿದ ವರದಿ ಪ್ರಕಾರ ಮಾದಕ ವಸ್ತುಗಳ ಪೂರೈಕೆಯ ಜಾಲದ ಟಾರ್ಗೆಟ್ ಶಾಲಾ ಕಾಲೇಜು ವಿದ್ಯಾರ್ಥಿಗಳೇ ಆಗಿದ್ದಾರೆ. ಅಪ್ರಾಪ್ತ ವಯಸ್ಸಿನ, ಮುಖ್ಯವಾಗಿ 10-17 ವಯೋಮಾನದ ವಿದ್ಯಾರ್ಥಿಗಳೇ ಬಹುದೊಡ್ಡ ಪ್ರಮಾಣದಲ್ಲಿ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಪಂಜಾಬ್, ಹರ್ಯಾಣ, ಅಸ್ಸಾಂ, ಆಂಧ್ರ ಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ದಿಲ್ಲಿ, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ಅಪಾಯಕಾರಿ ಪ್ರಮಾಣದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುತ್ತಿದೆ. ಈ ಸಮಸ್ಯೆಯನ್ನು ಕೇವಲ ವ್ಯಕ್ತಿಗಳ ನೈತಿಕ ಅಧಃಪತನದ ಪ್ರಕರಣಗಳು ಎಂದಷ್ಟೇ ಪರಿಗಣಿಸದೆ, ರಾಷ್ಟ್ರದ ಭದ್ರತೆಯ ಸವಾಲು, ಭವಿಷ್ಯದ ಪೀಳಿಗೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡುವ ಸಂಚು ಎಂದು ಹೇಳಿದರು.
ವಿಭಾಗ ಸಹ ಪ್ರಮುಖ ಡಾ.ಅಮಿತಕುಮಾರ ಬಿರಾದಾರ ಮಾತನಾಡಿ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಕೇವಲ ಭಾರತೀಯ ಯುವಕ ಯುವತಿಯರಿಗೆ ತಾತ್ಕಾಲಿಕ ಉನ್ಮಾದ ಉಂಟುಮಾಡುವ ಕಾರ್ಯಾಚರಣೆಯಾಗದೆ ದೇಶವನ್ನೇ ನಿಶ್ಯಕ್ತಗೊಳಿಸುವ ಅಂತಾರಾಷ್ಟ್ರೀಯ ಸಂಚಿನ ಭಾಗವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಯುವಕರನ್ನೇ ಗುರಿಯಾಗಿಸಿ ಗುರಿಯಾಗಿಸಿಕೊಂಡ ವ್ಯವಸ್ತಿತ ಸಂಚು ಇದು ಎಂದು ಅರಿಯದ ಹೊರತು ಪರಿಹಾರ ಸಾಧ್ಯವಿಲ್ಲ. ಮನರಂಜನೆಯ ಮಾಧ್ಯಮಗಳು ನಶೆಯನ್ನು ಪ್ರಚೋದಿಸುವುದರ ಜತೆಗೆ ಅದನ್ನು ವೈಭವೀಕರಿಸುತ್ತಿವೆ. ಇದರ ಪರಿಣಾಮವನ್ನೇ ಅರಿಯದ ಅಜ್ಞಾನದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಒಂದು ದೇಶವನ್ನು ವಿದ್ವಂಸನಗೊಳಿಸಬೇಕಾದರೆ ಬಾಂಬ್ ಹಾಕುವುದಕ್ಕಿಂತಲೂ, ಅಲ್ಲಿನ ಯುವಜನರನ್ನು ನಶೆಯ ದಾಸರನ್ನಾಗಿಸಿದರೆ ಸಾಕು, ತಾನೇ ನಾಶವಾಗುತ್ತದೆ ಎಂದರು.ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಮಲ್ಲಿಕಾರ್ಜುನ ಮಾಳಿ, ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ, ಪ್ರವೀಣ ಬಿರಾದಾರ, ಚೇತನಕುಮಾರ ಮುಂತಾದವರು ಇದ್ದರು.