ಹಾನಗಲ್ಲ ಬಿಇಒ ಕಚೇರಿಗೆ ವಿದ್ಯಾರ್ಥಿಗಳ ಮುತ್ತಿಗೆ

| Published : Aug 02 2024, 12:46 AM IST

ಸಾರಾಂಶ

ಆಂಗ್ಲ ಭಾಷಾ ಶಿಕ್ಷಕಿ ಸುಮಾ ಅವರ ನಿಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬೈಚವಳ್ಳಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಹಾನಗಲ್ಲ: ಆಂಗ್ಲ ಭಾಷಾ ಶಿಕ್ಷಕಿ ಸುಮಾ ಅವರ ನಿಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬೈಚವಳ್ಳಿ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ನಿಯೋಜನೆ ರದ್ದುಗೊಳಿಸಲು ಬೆಂಗಳೂರು ಆಯುಕ್ತರು, ಧಾರವಾಡದ ಅಪರ ಆಯುಕ್ತರು, ಹಾವೇರಿಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿ ಜುಲೈ ೧೫ ರೊಳಗೆ ಆಂಗ್ಲಭಾಷಾ ಶಿಕ್ಷಕಿ ನಿಯೋಜನೆ ರದ್ದುಗೊಳಿಸಿ ನಮ್ಮ ಶಾಲೆಗೆ ಹಾಜರಾಗಲು ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ, ೮ ಹಳ್ಳಿಗಳ ಮಕ್ಕಳ ಪಾಲಕರು ಮನವಿ ಸಲ್ಲಿಸಿ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ಮಾಡಿದ್ದರು. ಇದು ಈಡೇರದ ಕಾರಣ ಹಾನಗಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಬೈಚವಳ್ಳಿ ಸರಕಾರಿ ಪ್ರೌಢಶಾಲೆಯ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಆಂಗ್ಲ ಭಾಷಾ ಶಿಕ್ಷಕಿ ಸುಮಾ ಅವರನ್ನು ನಮ್ಮ ಶಾಲೆಯಿಂದ ಶಿರಸಿ ತಾಲೂಕಿನ ಇಸಳೂರು ಪ್ರೌಢಶಾಲೆಗೆ ನಿಯೋಜನೆ ಮಾಡಿದ್ದರಿಂದ ಶಾಲಾ ಆರಂಭದಿಂದಲೇ ಆಂಗ್ಲಭಾಷಾ ಬೋಧನೆಗೆ ಸಮಸ್ಯೆಯಾಗಿದೆ. ಅವರ ನಿಯೋಜನೆಯನ್ನು ರದ್ದುಪಡಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗ ಅವರ ನಿಯೋಜನೆ ರದ್ದುಪಡಿಸಿ ನಮ್ಮ ಶಾಲೆಗೆ ಹಾಜರಾಗುವವರೆಗೆ ಇಲ್ಲಿಂದ ವಿರಮಿಸುವುದಿಲ್ಲ ಎಂದು ಪಟ್ಟು ಹಿಡಿದರು.

ಈಗಾಗಲೇ ವಿಜ್ಞಾನ, ಸಮಾಜ ವಿಜ್ಞಾನ ಶಿಕ್ಷಕರ ಕೊರತೆಯೂ ಇದೆ. ಇದು ನಮ್ಮ ಶಾಲೆಯ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ. ಗುಣಮಟ್ಟದ ಶಿಕ್ಷಣ ನೀಡಬೇಕಾದ ಇಲಾಖೆ ಶಿಕ್ಷಕರನ್ನೇ ನೀಡದಿದ್ದರೆ ನಮ್ಮ ಗತಿ ಏನು ಎಂದು ಪ್ರಶ್ನಿಸಿದರು. ನಮ್ಮ ಶಾಲೆಯಲ್ಲಿ ೮ರಿಂದ ೧೦ನೇ ತರಗತಿವರೆಗೆ ೨೯೧ ವಿದ್ಯಾರ್ಥಿಗಳು ೮ ಗ್ರಾಮಗಳಿಂದ ಬಂದು ಅಭ್ಯಾಸ ಮಾಡುತ್ತಿದ್ದಾರೆ. ಬಸ್‌ಗಳ ವ್ಯವಸ್ಥೆ ಇಲ್ಲದಿದ್ದರೂ ರಾಮತೀರ್ಥ, ಹೊಸಕೊಪ್ಪ, ಚೀರನಹಳ್ಳಿ, ಗುಡಗುಡಿ, ಹುಲ್ಲತ್ತಿ, ದಶರಥಕೊಪ್ಪ, ಹಸನಾಬಾದಿ, ಗಡೆಗುಂಡಿಯಲ್ಲಾಪೂರ ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬಂದು ಆಂಗ್ಲಭಾಷಾ ಪಾಠವಿಲ್ಲದೆ ಪರಿತಪಿಸುವಂತಾಗಿದೆ. ಶಿಕ್ಷಕರ ಕೊರತೆ ನೀಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪುಣ್ಯ ಕಟ್ಟಿಕೊಳ್ಳಿ ಎಂದು ಮಕ್ಕಳು ಘೊಷಣೆ ಕೂಗಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ ವಿದ್ಯಾರ್ಥಿಗಳು ಮೇಲುಸ್ತುವಾರಿ ಸಮಿತಿ ಸದಸ್ಯರು ಹಾಗೂ ಪಾಲಕರ ಮನವಿಗೆ ಪ್ರತಿಕ್ರಿಯಿಸಿ ಶೀಘ್ರ ಸಮಸ್ಯೆ ಪರಿಹರಿಸುವ ವಿಶ್ವಾಸ ವ್ಯಕ್ತಪಡಿಸಿ, ಮುತ್ತಿಗೆ ನಿಲ್ಲಿಸಿ ಪಾಠಗಳಿಗೆ ಹಾಜರಾಗಲು ಮನವಿ ಮಾಡಿದರು. ಹಾನಗಲ್ಲ ತಾಲೂಕಿನಲ್ಲಿ ಸರಕಾರಿ ಪ್ರೌಢಶಾಲೆಗಳಿಗೆ ೫೪ ಸಹ ಶಿಕ್ಷಕರ ಕೊರತೆ ಇದೆ. ೫೧ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ೧೬ ಹಿಂದಿ ಶಿಕ್ಷಕರ ಕೊರತೆಯನ್ನು ನೀಗಿಸಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಧರಣಿ ನಿಲ್ಲಿಸಿ ಶಾಲೆಗೆ ಹೋಗುವಂತೆ ಮನವಿ ಮಾಡಿದರು.ಡಿಡಿಪಿಐ ಭೇಟಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿಯ ಉಪನಿರ್ದೇಶಕರಿಗೆ ಹಾನಗಲ್ಲ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆಗಳ ಕುರಿತು ಗಮನಕ್ಕೆ ತರಲಾಗಿದೆ. ಆ. ೨ರಂದು ಉಪನಿರ್ದೇಶಕರು ಹಾನಗಲ್ಲ ತಾಲೂಕಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವರೆಂಬ ವಿಶ್ವಾಸವಿದೆ. ಬೈಚವಳ್ಳಿ ಸರಕಾರಿ ಪ್ರೌಢಶಾಲೆ ಹಾಗೂ ಸಮಸ್ಯಾತ್ಮಕ ಪ್ರಾಥಮಿಕ ಪ್ರೌಢಶಾಲೆಗಳಿಗೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ತಾವರಗೇರಿ, ಉಪಾಧ್ಯಕ್ಷ ತಿಮ್ಮಣ್ಣ ಅಲಿಲವಾಡ, ಪಾಲಕರಾದ ಮಲ್ಲನಗೌಡ ಪಾಟೀಲ, ಭರಮಗೌಡ ಪಾಟೀಲ, ಚನಬಸಯ್ಯ ಹಿರೇಮಠ, ಮಹಮ್ಮದಜಾಫರ ಹಸನಾಬಾದಿ, ಅಜ್ಜನಗೌಡ ಪಾಟೀಲ, ಶಂಕ್ರಪ್ಪ ವಾಲೀಕಾರ, ರುದ್ರಗೌಡ ಪಾಟೀಲ, ಮೋದಿನಸಾಬ ನಾಗರೊಳ್ಳಿ, ನಾಗೇಂದ್ರ ಯಮನಕ್ಕನವರ, ಮಾರ್ಥಂಡಪ್ಪ ಆಲದಕಟ್ಟಿ, ದೇವೇಂದ್ರಪ್ಪ ಅಡಕಿಹಾಳ ಸೇರಿದಂತೆ ಪಾಲಕರು, ಊರ ನಾಗರಿಕರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.