ಸಾರಾಂಶ
ಈ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ತರಗತಿ ನಡೆಸದೆ ಪರೀಕ್ಷೆ ಬೇಡ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು
ಕೊಪ್ಪಳ: ಅತಿಥಿ ಉಪನ್ಯಾಸಕರನ್ನು ನೇಮಿಸುವಂತೆ ಒತ್ತಾಯಿಸಿ ಎಐಡಿಎಸ್ಓ ನೇತೃತ್ವದಲ್ಲಿ ನಗರದ ಸರ್ಕಾರಿ ಪದವಿ ಕಾಲೇಜು ಬಳಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು.
ನೂರಾರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆದಿಲ್ಲ.ಎರಡು ಘಟಕ ಪರೀಕ್ಷೆ ಮುಗಿಸಿ,ಸೆಮಿಸ್ಟರ್ ಪರೀಕ್ಷೆಯ ತಯಾರಿಯಲ್ಲಿ ಖಾಸಗಿ ಪದವಿ ಕಾಲೇಜುಗಳಿವೆ. ಆದರೆ ಸರ್ಕಾರಿ ಕಾಲೇಜಿನಲ್ಲಿ ತರಗತಿಗಳೇ ನಡೆದಿಲ್ಲ. ಈ ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು ತರಗತಿ ನಡೆಸದೆ ಪರೀಕ್ಷೆ ಬೇಡ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.ಎಐಡಿಎಸ್ಓ ರಾಜ್ಯ ಸಮಿತಿ ಸದಸ್ಯೆ ಸಿಂಧೂ.ಕೆ ಮಾತನಾಡಿ, ಅತಿಥಿ ಉಪನ್ಯಾಸಕರಿಲ್ಲದೇ ಒಂದೂ ತರಗತಿ ನಡೆಯದಿದ್ದರೂ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವ ವಿವಿಗಳ ಧೋರಣೆ ಖಂಡನೀಯ. ಸರ್ಕಾರಿ ವಿವಿಗಳು ಖಾಸಗಿ ಪದವಿ ಕಾಲೇಜುಗಳಿಗೆ ಮಾತ್ರವೇ ಇರುವುದೇ ಎಂಬ ಪ್ರಶ್ನೆ ಮೂಡುತ್ತದೆ. ಆದ್ದರಿಂದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ವಿದ್ಯಾರ್ಥಿಗಳು ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರಾದ ಗಂಗರಾಜ ಅಳ್ಳಳ್ಳಿ, ಶರಣು, ತಿರುಪತಿ, ಆಕಾಶ, ಪರಶುರಾಮ, ಸಾವಿತ್ರಿ, ದುರ್ಗಾ, ನಾಗರತ್ನ, ಗಂಗಾ ಮುಂತಾದವರಿದ್ದರು.