ಸಾರಾಂಶ
ಹೊನ್ನಾವರ: ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಅವರು ಸೋಮವಾರ ಜನಸ್ಪಂದನಾ ಕಾರ್ಯಕ್ರಮದ ಮೂಲಕ ನೂರಾರು ಜನರ ಅಹವಾಲು ಸ್ವೀಕರಿಸಿದರು.
ಜನತೆ ವಿವಿಧ ರೀತಿಯ ಸಹಾಯ,ಸಹಕಾರ ಹಾಗೂ ಸಮಸ್ಯೆಗಳನ್ನು ಕೇಳಿಕೊಂಡು ಸಚಿವರೊಂದಿಗೆ ಮಾತನಾಡಿದರು. ಮಕ್ಕಳು, ಅಂಗವಿಕಲರು, ವಯೋವೃದ್ಧರೊಂದಿಗೆ ಸಚಿವರು ಪ್ರೀತಿಯಿಂದ ಮಾತನಾಡಿಸುತ್ತಾ ಅವರ ಮನವಿ ಆಲಿಸಿದರು. ಇದೆ ವೇಳೆ ಕಡತೋಕಾದ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಬಸ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.ಈ ಬಾರಿ ಮಹಿಳೆಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನತಾದರ್ಶನದಲ್ಲಿ ಪಾಲ್ಗೊಂಡು ತಮ್ಮ ಬೇಡಿಕೆ ಸಲ್ಲಿಸಿರುವುದು ಕಂಡುಬಂತು. ತುರ್ತು ಅನಾರೋಗ್ಯದಿಂದ ನೆರೆ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು, ನೆರೆಹೊರೆಯವರಿಂದ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಿಲ್ ತುಂಬಿದ್ದರು. ಸರ್ಕಾರದಿಂದ ನೆರವಿಗಾಗಿ ಸಚಿವರಲ್ಲಿ ಅಳಲು ತೊಡಿಕೊಂಡರು. ಸಿಎಂ ಪರಿಹಾರ ನಿಧಿಯ ಜತೆಗೆ ವೈಯಕ್ತಿಕವಾಗಿಯು ತಮ್ಮ ಕಷ್ಟಕ್ಕೆ ಆರ್ಥಿಕವಾಗಿ ಸ್ಪಂದಿಸುವುದಾಗಿ ಹೇಳುವ ಮೂಲಕ ಸಚಿವರು ತಮ್ಮ ಮಾನವೀಯತೆ ಮೆರೆದರು.
ಜನಸ್ಪಂದನದಲ್ಲಿ ಜನರಿಂದ ಬಂದ ಕೆಲವಷ್ಟು ಮನವಿ ಹಾಗೂ ಬೇಡಿಕೆಗಳಿಗೆ ಸ್ಥಳದಲ್ಲಿಯೇ ಸಚಿವರು ಸ್ಪಂದಿಸಿದರು. ಇನ್ನೂ ಕೆಲವಷ್ಟನ್ನು ಶೀಘ್ರವಾಗಿ ಮಾಡಿಕೊಡುವ ಭರವಸೆ ನೀಡಿದರು. ಶಾಸಕನಾಗಿದ್ದಾಗಲು ಜನರ ಜತೆ ಇದ್ದೇನೆ, ಸಚಿವನಾದ ಮೇಲು ಜನರ ಜೊತೆ ಇರುತ್ತಿದ್ದೇನೆ. ಜನರ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿಯೆ ಜನಸ್ಪಂದನಾ ನಡೆಸುವುದು. ಯಾವುದೇ ಕಾರಣಕ್ಕೂ ವಿಚಲಿತರಾಗಬೇಡಿ, ಗೊಂದಲಕ್ಕೊಳಗಾಗಬೇಡಿ ಎಂದು ಜನತೆಗೆ ಅಭಯಹಸ್ತ ನೀಡಿದರು.ಸಾರ್ವಜನಿಕರ ಅಹವಾಲು ಆಲಿಸಿದ ಸಚಿವ ಮಂಕಾಳ ವೈದ್ಯ:
ಜಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಸೋಮವಾರ ಸಂಜೆ ಪಟ್ಟಣದ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.ತಾಲೂಕಿನ ಮೂಲೆ ಮೂಲೆಯಿಂದ ಆಗಮಿಸಿದ ಸಾರ್ವಜನಿಕರು ರಸ್ತೆ, ಮನೆ, ಅನಾರೋಗ್ಯ, ಮನೆ ನಿರ್ಮಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರಿಗೆ ಅರ್ಜಿ ಸಲ್ಲಿಸಿದರು.ಹೆಬಳೆಯಲ್ಲಿ ತ್ಯಾಜ್ಯ ಮತ್ತು ಕಸ ವಿಲೇವಾರಿ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಸಚಿವರಲ್ಲಿ ಆಗ್ರಹಿಸಿದರು. ಸಚಿವರು ಸಾರ್ವಜನಿಕರ ಸಮಸ್ಯೆ ಅಲಿಸಿ ಸೂಕ್ತ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡಿ ಕ್ರಮ ಕೈಗೊಳ್ಳುವಂತೆ ತಮ್ಮ ಆಪ್ತ ಸಹಾಯಕರಿಗೆ ಸೂಚಿಸಿದರು.
ನೂರಾರು ಜನರು ಸಚಿವರ ಕಚೇರಿಗೆ ಆಗಮಿಸಿ ಸಮಸ್ಯೆ ಹೇಳಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕ್ಷೇತ್ರದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನಸ್ಪಂದನೆ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದೇನೆ. ಇದರಿಂದ ಪಂಚಾಯಿತಿ ವ್ಯಾಪ್ತಿಯ ಜನರಿಗೆ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ. ಪ್ರಥಮವಾಗಿ ಬೈಲೂರು ಗ್ರಾಪಂನಿಂದ ಜನಸ್ಪಂದನೆ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು. ಜನಸ್ಪಂದನೆ ಸಭೆಯಲ್ಲಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ಥಳೀಯ ಜನರಿಗೆ ಸಹಾಯವಾಗಲಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಸಚಿವರ ಪುತ್ರಿ ಬೀನಾ ವೈದ್ಯ ಮುಂತಾದವರಿದ್ದರು.