ಸಾರಾಂಶ
ಗದಗ: ನಮ್ಮ ಭಾವನೆ ಶುದ್ಧವಾಗಿದ್ದರೆ ಭಾಗ್ಯಕ್ಕೇನು ಕೊರತೆ, ನಮ್ಮಲ್ಲಿ ಸದೃಢ ಸಂಕಲ್ಪವಿದ್ದರೆ ನಮ್ಮ ಬಳಿ ಸೋಲು ಸುಳಿಯುವುದಿಲ್ಲ, ವಿದ್ಯಾರ್ಥಿಗಳು ಜೀವನದಲ್ಲಿ ಸದ್ಭಾವನೆ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾ. ಕೆ.ಎಚ್. ಬೇಲೂರ ಹೇಳಿದರು.
ಅವರು ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪಪೂ ಮಹಾವಿದ್ಯಾಲಯದಲ್ಲಿ ಜರುಗಿದ 2024-25ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಎಚ್‌ಸಿಇಎಸ್ ಶಿಕ್ಷಣ ಸಂಸ್ಥೆಯ ಸದಸ್ಯ ಎ.ಎಂ. ಮುಲ್ಲಾ ಮಾತನಾಡಿ, ಶಿಕ್ಷಕರ ವೃತ್ತಿಯು ಅತ್ಯಂತ ಶ್ರೇಷ್ಠವಾದದ್ದು, ಇದು ಎಲ್ಲರಿಗೂ ಸಿಗುವಂತದ್ದಲ್ಲ. ಬಾಲ್ಯದಲ್ಲಿ ಶಿಕ್ಷಕರಾಗಬೇಕೆಂಬ ಹಂಬಲವಿದ್ದರೆ ಮಾತ್ರ ಈ ಭಾಗ್ಯವು ಲಭ್ಯವಾಗುತ್ತದೆ. ಇಂತಹ ಶಿಕ್ಷಕರಿಗೆ ಸದೃಢ ಮತ್ತು ಮಾನವೀಯ ಮೌಲ್ಯಗಳುಳ್ಳ ವಿದ್ಯಾರ್ಥಿಗಳನ್ನು ನಿರ್ಮಿಸಿ, ಸದೃಢ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗುವಂತೆ ಅವರನ್ನು ಪ್ರೇರೆಪಿಸುತ್ತಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ರವೀಂದ್ರ. ಎಂ.ಮೂಲಿಮನಿ ಮಾತನಾಡಿ, ಆದರ್ಶವಿರುವದು ಬರಿ ಸಿದ್ಧಾಂತದಲ್ಲಿ ಅಲ್ಲ ಅದರ ಅನುಷ್ಠಾನದಲ್ಲಿರುವುದು. ಸಾಧಕರ ಸಾಧನೆಗಳನ್ನು ಗಮನಿಸುತ್ತಾ ಅವರ ಸಾಧನೆ ಹಿಂದಿರುವ ಸತತ ಪ್ರಯತ್ನ, ಛಲ ಮತ್ತು ಗೆದ್ದೇ ಗೆಲ್ಲುತ್ತೇನೆ ಎಂಬ ಸಕಾರಾತ್ಮಕ ಭಾವನೆ ಹೊಂದಿ ಮಾನವೀಯ ಮೌಲ್ಯವುಳ್ಳ ವ್ಯಕ್ತಿಗಳಾಗಿ ಹೊರಹೊಮ್ಮಿ ಕಲಿತ ಶಾಲೆ ಮತ್ತು ಕಾಲೇಜಿಗೆ ಕೀರ್ತಿ ತರುವಂತವರಾಗಬೇಕೆಂದು ತಿಳಿಸಿದರು.ಈ ವೇಳೆ ಪ್ರಾ.ಬಿ.ಬಿ. ಪಾಟೀಲ ಮಾತನಾಡಿದರು. ಕಾಲೇಜಿನ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ದೈಹಿಕ ಶಿಕ್ಷಕ ವೈ.ಎಸ್.ಹುನಗುಂದ ಪ್ರತಿಜ್ಞಾವಿಧಿ ಬೋಧಿಸಿದರು. ಆಡಳಿತ ಅಧಿಕಾರಿ ಆರ್.ಎಸ್. ಪಾಟೀಲ, ಪ್ರಾ. ಎಲ್.ಎಸ್. ಪಾಟೀಲರು ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಪಿ.ವಿ. ಹಳೆಮನಿ ಸ್ವಾಗತಿಸಿದರು. ಪಾರಿತೋಷಕ ವಿತರಣಾ ಕಾರ್ಯಕ್ರಮವನ್ನು ಉಪನ್ಯಾಸಕ ಎಂ.ಡಿ.ಮಾದರ ನಡೆಸಿದರು. ಉಪನ್ಯಾಸಕಿ ಎಸ್.ಎಸ್. ಪವಾರ ನಿರೂಪಿಸಿದರು. ಉಪನ್ಯಾಸಕಿ ಎಚ್.ಎಂ. ಪಾಟೀಲ ವಂದಿಸಿದರು.