ಸಾರಾಂಶ
ಎನ್.ಆರ್.ಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿದ್ಯಾರ್ಥಿಗಳ ಕಲಿಕೆ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಲ್ಲ, ಅದು ಪಠ್ಯೇತರವಾಗಿಯೂ ಇರಬೇಕು ಎಂದು ಎನ್.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎನ್.ಆರ್.ಪುರ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಪಠ್ಯ ಚಟುವಟಿಕೆಯೊಂದಿಗೆ ಕ್ರೀಡೆ, ಕಲೆ, ಸಾಂಸ್ಕೃತಿಕ ಕೌಶಲ್ಯ ಬೆಳೆಸುವುದೇ ನಿಜವಾದ ಪ್ರತಿಭಾ ಕಾರಂಜಿಯಾಗಿದೆ. ಇದು ವಿದ್ಯಾರ್ಥಿಗಳ ಮುಂದಿನ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ವಿದ್ಯಾರ್ಥಿಗಳ ಪ್ರತಿಭೆ ಹೊರಹೊಮ್ಮಿಸುವ ಉದ್ದೇಶದಿಂದ ಕಳೆದ ೨೩ ವರ್ಷಗಳ ಹಿಂದೆ ಆರಂಭಿಸಿದ ಪ್ರತಿಭಾ ಕಾರಂಜಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಮುನ್ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಅವರ ಪ್ರತಿಭೆ ತೋರ್ಪಡಿಸಲು ಇದು ಒಂದು ಒಳ್ಳೆಯ ಅವಕಾಶ ನೀಡಲಿದೆ. ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳಿಗೆ ವೈಯುಕ್ತಿಕ ವಿಭಾಗದಲ್ಲಿ 65 ವಿಧದ ಸ್ಪರ್ಧೆ, ಗುಂಪು ವಿಭಾಗದಲ್ಲಿ 3 ವಿಧದ ಸ್ಪರ್ಧೆ ನಡೆಯಲಿದ್ದು, ಕಲೆ, ಸಂಸ್ಕೃತಿ ಎತ್ತಿಹಿಡಿಯುವ ಕೆಲಸ ಆಗುತ್ತಿದೆ. ತೀರ್ಪುಗಾರರು ನ್ಯಾಯಯುತವಾಗಿ ವಿದ್ಯಾರ್ಥಿಗಳಿಗೆ ತೀರ್ಪು ನೀಡಿ ತಮ್ಮ ಬದ್ಧತೆ ತೋರಿಸಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಪ್ರತಿಭಾ ಕಾರಂಜಿ ಆರಂಭಿಸಿದ ಕೀರ್ತಿ ಎನ್.ಆರ್.ಪುರ ತಾಲೂಕಿಗೆ ಸಲ್ಲುತ್ತದೆ. ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರ ಕಾಲದಲ್ಲಿ ಇದು ಆರಂಭಗೊಂಡಿತ್ತು.ಪ್ರತಿಭೆ ಎಂಬುದು ಯಾರ ಮನೆ ಸ್ವತ್ತು ಅಲ್ಲ. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತರಲು ವೇದಿಕೆಗಳು ಅಗತ್ಯ ವಾಗಿದ್ದು, ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಟ್ಟು ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳು ಪುಸ್ತಕದ ಓದಿನ ಜೊತೆಗೆ ಕ್ರೀಡೆ, ಕಲೆ, ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು. ಇದು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.
ಎನ್.ಆರ್.ಪುರ ತಹಸೀಲ್ದಾರ್ ಡಾ.ನೂರುಲ್ ಹುದಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂತ್ರಜ್ಞಾನಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಮಕ್ಕಳಲ್ಲಿ ಕೌಶಲ್ಯ ತುಂಬಲು ಪೋಷಕರು ಗಮನಹರಿಸಬೇಕಿದೆ. ಜೀವನದ ಮೌಲ್ಯ ಗಳನ್ನು ತಿಳಿಸಿಕೊಡಬೇಕಿದೆ. ಪ್ರತಿಯೊಬ್ಬರೂ ಸಹ ಇಂದು ವ್ಯಾಟ್ಸಾಪ್ ಸ್ಟೇಟಸ್ ಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ನಮ್ಮೊಳಗಿನ ಸಾಮರ್ಥ್ಯದ ಬಗ್ಗೆ ಯಾರಿಗೂ ಅರಿವು ಇಲ್ಲವಾಗಿದೆ.ಮಕ್ಕಳಲ್ಲಿ ಉತ್ತಮವಾದ ಚಾರಿತ್ರ್ಯವನ್ನು ತುಂಬಿದಾಗ ಮಾತ್ರ ಉತ್ತಮ ಗುರಿ ಸಾಧಿಸಲು ಸಾಧ್ಯವಿದೆ. ನಮ್ಮ ಮಕ್ಕಳಿಗೆ ಉತ್ತಮ ಫೋನು, ಬಟ್ಟೆ, ಆಸ್ತಿ ಕೊಡುವ ಬಗ್ಗೆ ಯೋಚಿಸದೆ ಜೀವನದ ಬಗ್ಗೆ ಕಲಿಸಿಕೊಡಬೇಕಿದೆ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಮಾತನಾಡಿ, ಬಿ.ಕಣಬೂರು ಗ್ರಾಪಂನಿಂದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು, ಶಾಸಕರ ಸಹಯೋಗದಲ್ಲಿ ಪಟ್ಟಣದ ಪ್ರಮುಖ ಶಾಲೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಕಾಂಕ್ರೀಟ್ ರಸ್ತೆ ನಿರ್ಮಿಸಿ ಇಂಟರ್‌ಲಾಕ್ ಅಳವಡಿಕೆ, ಫುಟ್‌ಪಾತ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ಮಾಡಿಕೊಡಲಾಗಿದೆ. ಕಲಾರಂಗ ಕ್ರೀಡಾಂಗಣವನ್ನು ಸಮತಟ್ಟುಗೊಳಿಸುವ ಕಾರ್ಯ ಸಹ ಆರಂಭಿಸಿದ್ದು, ವಿದ್ಯಾರ್ಥಿಗಳಿಗೆ ಆಡಲು ವ್ಯವಸ್ಥೆ ಮಾಡಿ ಕೊಡಲಾಗುತ್ತಿದೆ. ಶಿಕ್ಷಣ ಕ್ಷೇತ್ರಕ್ಕೆ ಏನೆಲ್ಲಾ ಬೇಕೋ ಅದನ್ನು ಗ್ರಾಪಂನಿಂದ ಮಾಡಲಾಗಿದೆ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ.ಮಹೇಶ್ ಆಚಾರ್ಯ, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಸರಿತಾ, ಶಿವಪ್ಪ, ಇಬ್ರಾಹಿಂ ಶಾಫಿ, ಮಹಮ್ಮದ್ ಜುಹೇಬ್, ಶಶಿಕಲಾ, ಸದಾಶಿವ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ, ಬಗರ್ ಹುಕುಂ ಸಮಿತಿ ಸದಸ್ಯೆ ಹೇಮಲತಾ, ಪ್ರಮುಖರಾದ ಮಹಮ್ಮದ್ ಹನೀಫ್, ಟಿ.ಎಂ.ಉಮೇಶ್, ಕೆ.ಆರ್.ದೀಪಕ್, ಕೆ.ಕೆ. ವೆಂಕಟೇಶ್, ಶ್ರೀಕಾಂತ್ ಗದ್ದೆಮನೆ, ಕೆ.ಎಂ.ರಾಘವೇಂದ್ರ, ಕೊಟ್ರೇಶಪ್ಪ, ಕೆ.ಎಸ್.ಚನ್ನಗಿರಿ, ಓ.ಡಿ.ಸ್ಟೀಫನ್, ಸುರೇಂದ್ರ, ಮಾಲತೇಶ್, ಬಿ.ಎಚ್.ಮನುಕುಮಾರ್, ರಾಕೇಶ್, ರವಿಕುಮಾರ್, ರಮೇಶ್ ನಾಯಕ್ ಮತ್ತಿತರರು ಹಾಜರಿದ್ದರು.
೨೧ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಸರ್ಕಾರಿ ಪ್ರೌಢಶಾಲೆಯ ಆತಿಥ್ಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮವನ್ನು ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್ ಉದ್ಘಾಟಿಸಿದರು. ಶಬನಾ ಅಂಜುಮ್, ಡಾ.ನೂರುಲ್ ಹುದಾ, ರವಿಚಂದ್ರ, ಮಹೇಶ್ ಆಚಾರ್ಯ, ಅರುಣೇಶ್, ಉಮೇಶ್, ದೀಪಕ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))