ಕನ್ನಡಪ್ರಭ ವಾರ್ತೆ ಮಡಿಕೇರಿ

ವಿದ್ಯಾರ್ಥಿ ಜೀವನ ವ್ಯಕ್ತಿಯ ಭವಿಷ್ಯ ರೂಪಿಸುವ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಕಾನೂನು ಬಗ್ಗೆ ಅರಿವು ಹೊಂದುವುದು ಅತ್ಯಗತ್ಯ. ಕಾನೂನು ಉಲ್ಲಂಘಿಸುವ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅದು ವಿದ್ಯಾರ್ಥಿಗಳ ಭವಿಷ್ಯದ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಹೇಳಿದರು.ಸಿದ್ದಾಪುರ ಪೊಲೀಸ್ ಠಾಣೆ, ಬಾಡಗ ಬಾಣಂಗಾಲ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಮಾಲ್ದಾರೆ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ಪೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಕಾನೂನು ಉಲ್ಲಂಘನೆಯಾದಾಗ ಹಾಗೂ ಅಶಾಂತಿ ವಾತಾವರಣ ಸೃಷ್ಟಿಯಾದಾಗ ವಿದ್ಯಾರ್ಥಿಗಳು ಕಾನೂನು ಪಾಲಿಸಿ ಸಾಮಾಜಿಕ ಬದಲಾವಣೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಜ್ಞೆ ಬೋಧಿಸಲಾಯಿತು.