ಅರ್ಥಶಾಸ್ತ್ರ, ಇತಿಹಾಸ, ಕನ್ನಡ ಹಾಗೂ ಗಣಿತ ವಿಭಾಗಗಳಿಗೆ ಅಗತ್ಯವಿರುವ ಹೆಚ್ಚುವರಿ ಉಪನ್ಯಾಸಕರನ್ನು ತಕ್ಷಣ ನೇಮಕ ಮಾಡಬೇಕು. ಎಲ್ಲ ವಿಭಾಗಗಳಲ್ಲಿ ನಿಯಮಿತವಾಗಿ ತರಗತಿಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಜಯಂತಿ, ಸಾಂಸ್ಕೃತಿಕ, ಕ್ರೀಡಾ ದಿನಾಚರಣೆ ಹಾಗೂ ವಿದ್ಯಾರ್ಥಿ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಸ್ನಾತಕೋತ್ತರ ಪದವಿ ಕೇಂದ್ರದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಹಾಗೂ ಭ್ರಷ್ಟ ನಿರ್ದೇಶಕ ಗಂಗಾಧರ್ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಸಮತಾ ಸೖನಿಕ ದಳ ಯುವ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ತರಗತಿಗಳಿಂದ ದೂರ ಉಳಿದು ಸ್ನಾತಕೋತ್ತರ ಕೇಂದ್ರದ ಎದುರು ಜಮಾಯಿಸಿದ ವಿದ್ಯಾರ್ಥಿಗಳು, ಶೈಕ್ಷಣಿಕ ಸವಲತ್ತುಗಳನ್ನು ಒದಗಿಸದೆ ವಂಚಿಸುತ್ತಿರುವ ನಿರ್ದೇಶಕ ಗಂಗಾಧರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರ, ಇತಿಹಾಸ , ಕನ್ನಡ ಹಾಗೂ ಗಣಿತ ವಿಭಾಗಗಳಲ್ಲಿ ಪೂರ್ಣ ಪ್ರಮಾಣದ ಉಪನ್ಯಾಸಕರ ಕೊರತೆ ಇದೆ. ಪ್ರತಿಯೊಂದು ವಿಭಾಗಕ್ಕೂ ಕನಿಷ್ಠ ಒಬ್ಬ ಹೆಚ್ಚುವರಿ ಉಪನ್ಯಾಸಕರ ಅಗತ್ಯವಿದೆ. ಉಪನ್ಯಾಸಕರ ಕೊರತೆಯಿಂದ ತರಗತಿಗಳು ನಿಯಮಿತವಾಗಿ ನಡೆಯುತ್ತಿಲ್ಲ, ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಪರೀಕ್ಷೆಗಳಿಗೆ ಸಮರ್ಪಕವಾಗಿ ಸಿದ್ಧರಾಗಲು ಕಷ್ಟವಾಗಿದೆ ಎಂದು ದೂರಿದರು.

ಕೇಂದ್ರದಲ್ಲಿ ಪ್ರತಿವರ್ಷ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ವಿಶೇಷ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿತ್ತು. ಸಾಂಸ್ಕೃತಿಕ ಮತ್ತು ಕ್ರೀಡಾ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿತ್ತು. ಕೇಂದ್ರದ ನಿರ್ದೇಶಕರಾಗಿ ಗಂಗಾಧರ್ ನೇಮಕಗೊಂಡ ಬಳಿಕ ಕಳೆದ ಎರಡು ವರ್ಷಗಳಿಂದ ಇದ್ಯಾವ ಕಾರ್ಯಕ್ರಮಗಳೂ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಈ ಬಗ್ಗೆ ನಿರ್ದೇಶಕ ಗಂಗಾಧರ್ ಅವರನ್ನು ಕೇಳಿದರೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಹಲವು ವಿದ್ಯಾರ್ಥಿಗಳಿಗೆ ಪರೀಕ್ಷಾ ನೋಂದಣಿ ಪತ್ರ ನೀಡದೆ ಧಮ್ಕಿ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಮತಾ ಸೈನಿಕ ದಳ ಯುವ ಘಟಕ ಜಿಲ್ಲಾಧ್ಯಕ್ಷ ಎನ್.ಸುರೇಶ್ , ಪೋಷಕರು ಕಷ್ಟಪಟ್ಟು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕೆಂದು ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಸ್ನಾತಕೋತ್ತರ ಕೇಂದ್ರದಲ್ಲಿ ಉಪನ್ಯಾಸಕರ ಕೊರತೆಯಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಕಷ್ಟವಾಗಿದೆ. ಇದಕ್ಕೆ ಕಾರಣವಾಗಿರುವ ನಿರ್ದೇಶಕ ಗಂಗಾಧರ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.

ಅರ್ಥಶಾಸ್ತ್ರ, ಇತಿಹಾಸ, ಕನ್ನಡ ಹಾಗೂ ಗಣಿತ ವಿಭಾಗಗಳಿಗೆ ಅಗತ್ಯವಿರುವ ಹೆಚ್ಚುವರಿ ಉಪನ್ಯಾಸಕರನ್ನು ತಕ್ಷಣ ನೇಮಕ ಮಾಡಬೇಕು. ಎಲ್ಲ ವಿಭಾಗಗಳಲ್ಲಿ ನಿಯಮಿತವಾಗಿ ತರಗತಿಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕು. ಅಂಬೇಡ್ಕರ್ ಜಯಂತಿ, ಸಾಂಸ್ಕೃತಿಕ, ಕ್ರೀಡಾ ದಿನಾಚರಣೆ ಹಾಗೂ ವಿದ್ಯಾರ್ಥಿ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಶುಲ್ಕವನ್ನು ವಿದ್ಯಾರ್ಥಿ ಅಭಿವೃದ್ಧಿ ಚಟುವಟಿಕೆಗಳಿಗೆ ಸಮರ್ಪಕವಾಗಿ ಬಳಸುವಂತೆ ಮೇಲ್ವಿಚಾರಣೆ ಮಾಡಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಹಿತಾಸಕ್ತಿಯನ್ನು ಕಾಪಾಡುವಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸುರೇಶ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಸಾಗರ್, ಭೀಮ್ ಆರ್ಮಿ ಸಂಘಟನೆ ಮುಖಂಡ ಪರಮೇಶ್, ಮುಖಂಡರಾದ ವಿನೋದ್ ರಾಜ್, ಮಧುಕುಮಾರ್, ನಂಜುಂಡ, ಬಿಡದಿ ಶಂಕರ್, ಪುನೀತ್, ಶಿವು, ರಾಜಶೇಖರ್, ಪೂರ್ಣಿಮಾ ಮತ್ತಿತರರು ಭಾಗವಹಿಸಿದ್ದರು.