ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಮರ ನೆಟ್ಟು ಬೆಳೆಸುವುದರ ಜತೆಗೆ ಪರಿಸರ ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು
ಕುಷ್ಟಗಿ: ಸ್ವಚ್ಛ ಪರಿಸರ ಮತ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕ್ಯಾದಿಗುಪ್ಪ ಗ್ರಾಪಂ ಪಿಡಿಒ ವಿದ್ಯಾಶ್ರೀ ಹೇಳಿದರು.
ತಾಲೂಕಿನ ಕ್ಯಾದಿಗುಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಜಲಾನ್ ಫೌಂಡೇಶನ್, ಪುಣೆ, ನೀಡ್ಸ್ ಸಂಸ್ಥೆ ರಾಣೆಬೆನ್ನೂರು ಹಾಗೂ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಪರಿಸರ ದಿನಾಚರಣೆ ಹಾಗೂ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಪರಿಸರ ಸಂರಕ್ಷಣೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವುದು ಅವಶ್ಯಕ ಎಂದು ತಿಳಿಸಿದರು.
ಎಸ್ಡಿಎಂಸಿ ಮಾಜಿ ಅಧ್ಯಕ್ಷ ಹನುಮಪ್ಪ ಶಿವನಗುತ್ತಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದ್ದು, ಮರ ನೆಟ್ಟು ಬೆಳೆಸುವುದರ ಜತೆಗೆ ಪರಿಸರ ಕಾಪಾಡುವ ಜವಾಬ್ದಾರಿ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಯುವಜನತೆಯು ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಮುಖ್ಯೋಪಾಧ್ಯಯ ರಾಜೇಂದ್ರ ಸಿನ್ನೂರು ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ವಹಿಸಿ ವ್ಯಸನಗಳಿಂದ ದೂರವಿದ್ದು, ಉತ್ತಮ ನಾಗರಿಕರಾಗಿ ಬೆಳೆಯಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಶಾಲಾ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸಲು ಸಹಕಾರಿಯಾಗಿವೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ನಶಾ ಮುಕ್ತ ಭಾರತದ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ದೇವಪ್ಪ ಬಾಚಾಳಿ, ಮಹಾಂತೇಶ ಸಜ್ಜಲಗುಡ್ಡ, ನೀಡ್ಸ್ ಸಂಸ್ಥೆಯ ಸಂಚಾಲಕ ಉಳವಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಶೇಖರಪ್ಪ ಉಪ್ಪಾರ. ಶರಣಪ್ಪ ಹೊಸಮನಿ, ಪತ್ರಕರ್ತ ಪರಶಿವಮೂರ್ತಿ ಮಾಟಲದಿನ್ನಿ, ವಿಪಿಕೆ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ ಕಂಟ್ಲಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಮಲ್ಲಮ್ಮಗೌಡರ, ಶಿಕ್ಷಕ ಬಸಪ್ಪ ವಾಲಿಕಾರ, ಮಹಾಂತೇಶ ಹೊಸಮನಿ, ಗೀತಾ ದೇವಾಂಗಮಠ, ಅಕ್ಕಮ್ಮ ಅರಳಿಕಟ್ಟಿ, ಎಸ್.ಎಸ್.ಅಂಗಡಿ, ಬಸಮ್ಮ ಧನ್ನೂರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.