ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು: ಶಾಸಕ ತಮ್ಮಯ್ಯ

| Published : Aug 03 2024, 12:36 AM IST

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಲಹೆ ಮಾಡಿದರು.

ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ವಿವಿಧ ವಿದ್ಯಾರ್ಥಿ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ದೃಷ್ಟಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಸಲಹೆ ಮಾಡಿದರು.ನಗರದ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದರಿಂದ ಅವರು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿ. ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿದೆಸೆಯಲ್ಲಿ ಬಹಳಷ್ಟು ಆಕರ್ಷಣೆಗಳಿರುತ್ತವೆ. ನಾವು ಅವುಗಳಿಗೆ ಮನಸೋತರೆ ನಮ್ಮ ವಿದ್ಯಾಭ್ಯಾಸ ಮೊಟಕು ಗೊಂಡು ಬದುಕಿನ ದಾರಿ ತಪ್ಪುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ವಿದ್ಯಾರ್ಜನೆ ಮಾಡಬೇಕು. ವಿದ್ಯಾರ್ಥಿನಿಯರು ಕೇವಲ ಇಂಜಿನಿಯರ್‌ಗಳಾಗದೇ ಐಎಎಸ್, ಐಪಿಎಸ್ ಅಧಿಕಾರಿಗಳಾಗಿಯೂ ಹೊರಹೊಮ್ಮಬೇಕು, ಆ ನಿಟ್ಟಿನಲ್ಲಿ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.ಐಡಿಎಸ್‌ಜಿ ಸರ್ಕಾರಿ ಕಾಲೇಜಿನ ಅಭಿವೃದ್ಧಿಗೆ ಈಗಾಗಲೇ 2 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಬದುಕಿನಲ್ಲಿ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದನ್ನೂ ಕಲಿಯಬೇಕು. ನಾಡನ್ನು ಕಟ್ಟುವ, ದೇಶ ಬೆಳೆಸುವ, ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಲಹೆ ಮಾಡಿದರು.

ಉಪನ್ಯಾಸ ನೀಡಿದ ಸಾಹಿತಿ ಎಚ್.ಎಂ. ನಾಗರಾಜರಾವ್‌ ಕಲ್ಕಟ್ಟೆ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಗುರುತಿಸಿ ಕೊಳ್ಳುವುದಾದರೆ ಒಳ್ಳೆಯವರೊಂದಿಗೆ ಪ್ರಾಮಾಣಿಕರು, ಸತ್ಯವಂತರೊಂದಿಗೆ ಗುರುತಿಸಿಕೊಳ್ಳಬೇಕು. ವಿದ್ಯಾರ್ಥಿಗಳ ಕನಸು ದೊಡ್ಡದಾಗಿರಬೇಕು. ಎತ್ತರದ ಗುರಿ ಇರಬೇಕು. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಆತ್ಮವಿಶ್ವಾಸವನ್ನು ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಚಲನಚಿತ್ರ ನಟ ಧರ್ಮಣ್ಣ ಮಾತನಾಡಿ, ಮಕ್ಕಳು ವಿದ್ಯಾರ್ಥಿದೆಸೆಯಲ್ಲೇ ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆ ಗುರುತಿಸಿ ಕೊಳ್ಳಬೇಕು. ಗೆದ್ದವರನ್ನು ಹಿಂಬಾಲಿಸುವ ಬದಲು ಅವರ ಸಾಧನೆ ಮತ್ತು ಅದರ ಹಿಂದಿನ ಪರಿಶ್ರಮವನ್ನು ಹಿಂಬಾಲಿಸಬೇಕು ಎಂದರು.ಮೈಸೂರಿನ ಜಾನಪದ ಕಲಾವಿದ ಅಮ್ಮ ರಾಮಚಂದ್ರ ಮಾತನಾಡಿ, ಹೆತ್ತವರನ್ನು ವಿದ್ಯೆ ಕಲಿಸಿಕೊಟ್ಟ ಗುರುಗಳನ್ನು ಗೌರವಿಸಿದರೆ ನಮಗೆ ಜೀವನದಲ್ಲಿ ಎಂದಿಗೂ ಸೋಲಾಗುವುದಿಲ್ಲ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಸಿ. ಚಾಂದಿನಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಯಿತು. ಚಿತ್ರ ನಟ ಧರ್ಮಣ್ಣ ಚಲನಚಿತ್ರ ನಟರ ಧ್ವನಿ ಅನುಕರಣೆ ಹಾಗೂ ಜಾನಪದ ಕಲಾವಿದ ಅಮ್ಮರಾಮಚಂದ್ರ ಗಾಯನ ವಿದ್ಯಾರ್ಥಿಗಳನ್ನು ರಂಜಿಸಿತು.

ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಆರೋಗ್ಯ ಕೇಂದ್ರವನ್ನು ಶಾಸಕರು ಉದ್ಘಾಟಿಸಿದರು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಾಧಾ ಸುಂದರೇಶ್, ಸುಮಂತ್, ರಾಜಶೇಖರ್, ಆದಿಲ್, ಮೋಹನ್, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ಪುಟ್ಟೇಗೌಡ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್. ಸೋಮಶೇಖರ್, ಸಹಾಯಕ ಪ್ರಾಧ್ಯಾಪಕ ಎ. ಸಿ. ಪುಟ್ಟಸ್ವಾಮಿ, ಸತೀಶ್, ಪ್ರೊ. ಕೆ.ಎನ್. ಲಕ್ಷ್ಮೀಕಾಂತ್, ವಿದ್ಯಾರ್ಥಿಗಳಾದ ವಿನಯ್, ಘನಸಿರಿ, ಪ್ರಿಯಾ ಉಪಸ್ಥಿತರಿದ್ದರು.2 ಕೆಸಿಕೆಎಂ 2ಚಿಕ್ಕಮಗಳೂರಿನ ಐಡಿಎಸ್‌ಜಿ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ವಿದ್ಯಾರ್ಥಿ ಸಂಘಗಳ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ವಿಧಾನಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಪ್ರಾಂಶುಪಾಲರಾದ ಡಾ. ಚಾಂದಿನಿ, ಮಂಜೇಗೌಡ ಇದ್ದರು.