ಸಾರಾಂಶ
ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ಶ್ರದ್ಧೆಯಿಂದ ಜ್ಞಾನಾರ್ಜನೆ ಮಾಡಿದರೆ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ.
ಕುಮಟಾ: ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಂತೆ ಶ್ರದ್ಧೆಯಿಂದ ಜ್ಞಾನಾರ್ಜನೆ ಮಾಡಿದರೆ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಶಿಕ್ಷಕರ ಜೊತೆ ನಯ ವಿನಯ, ವಿಧೇಯತೆಯಿಂದ ಇರಬೇಕು ಎಂದು ಬಿಜಿಎಸ್ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಟಿ. ಗೌಡ ಹೇಳಿದರು.ಮಿರ್ಜಾನಿನ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಸೆಂಟ್ರಲ್ ಸ್ಕೂಲ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ, ಶಿಕ್ಷಕರ ದಿನಾಚರಣೆ ಮತ್ತು ರಾಷ್ಟ್ರೀಯ ಕ್ರೀಡಾ ದಿನ ಉದ್ಘಾಟಿಸಿ ಮಾತನಾಡಿದರು.
ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಚಾರ್ಯೆ ಅರ್ಚನಾ ಭಟ್, ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಚಾರ್ಯೆ ರೇಷ್ಮಾ ಬಾಡ್ಕರ್ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು.ಸೆಂಟ್ರಲ್ ಸ್ಕೂಲ್ ಉಪಪ್ರಾಚಾರ್ಯೆ ಅನುರಾಧ ಗುನಗ, ಶಿಕ್ಷಕ ಎಂ.ಜಿ.ಹಿರೇಕುಡಿ ಇನ್ನಿತರರು ಇದ್ದರು. ಚದುರಂಗ ಹಾಗೂ ಇತರ ಸ್ಪರ್ಧೆ, ತಾಲೂಕು ದಸರಾ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿನೀತ ಮತ್ತು ಆದಿಶೇಷ ವೇದಘೋಷಗೈದರು. ದೀತ್ಯಾ ಸಂಗಡಿಗರು ಪ್ರಾರ್ಥಿಸಿದರು. ಕೃಷ್ಣಪ್ರಸಾದ ಸ್ವಾಗತಿಸಿದನು. ಸೃಷ್ಟಿ ಮತ್ತು ಸಂಗಡಿಗರು ನೃತ್ಯ ಪ್ರದರ್ಶಿಸಿದರು. ಎಚ್.ಆರ್.ಇಶಾನಿ, ಶ್ರೀಧರ ಕಾಮತ್ ಮತ್ತು ಸ್ಪಂದನಾ ನಾಯಕ ಭಾಷಣ ಮಾಡಿದರು. ಎನ್.ಶ್ರೇಯಾ, ಜೀವಿತಾ ಪಟಗಾರ ನಿರ್ವಹಿಸಿದರು.