ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಹದೇಶ್ವರ ಕ್ರೀಡಾಂಗಣದಲ್ಲಿ ಜಿಪಂ, ಕ್ಷೇತ್ರ ಶಿಕ್ಷಣ ಇಲಾಖೆ ಹಾಗೂ ಸೂರಾಪುರ ಸರ್ಕಾರಿ ಪ್ರೌಢ ಶಾಲಾ ಸಂಯುಕ್ತಾಶ್ರದಲ್ಲಿ ಪ್ರೌಢಶಾಲೆಗಳ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಏರ್ಪಡಿಸಲಾಗಿತ್ತು.ಹನೂರು ಶಾಸಕ ಎಂ.ಆರ್.ಮಂಜುನಾಥ್ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢವಾಗುವುದರ ಜೊತೆಗೆ ಮಾನಸಿಕವಾಗಿ ವಿಕಾಸ ಪಡೆಯಬಹುದು. ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಮ್ಮ ದೇಶ ಹಾಗೂ ಚೀನಾ ದೇಶ ಜನಸಂಖ್ಯೆಯಲ್ಲಿ ಇಡೀ ಪ್ರಪಂಚವನ್ನೇ ಮೀರಿಸಿದೆ. ಆದರೆ ಕ್ರೀಡೆಯಲ್ಲಿ ಇತರ ಎಲ್ಲಾ ದೇಶಗಳಿಂತ ಹಿಂದುಳಿದ ನಮ್ಮ ದೇಶವಾಗಿದೆ. 2023-24 ರಲ್ಲಿ ಒಲಂಪಿಕ್ ನಲ್ಲಿ ಭಾಗವಹಿಸಿದ್ದ ನಮ್ಮ ದೇಶದ ಕ್ರೀಡಾಪಟುಗಳು ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚು ಗಳಿಸಿತ್ತು. 2024-25 ಒಂದು ಸಿಲ್ವರ್, ಒಂದು ಕಂಚು ಪದಕ ಪಡೆಯುವುದರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಕ್ರೀಡಾಂಗಣ ನಿರ್ಮಾಣಕ್ಕೆ ಎಆರ್‌ಕೆ ಭರವಸೆ:
ಈ ಅಂಕಿ ಅಂಶ ನೋಡಿದರೆ ರಾಜ್ಯ ಹಾಗೂ ರಾಷ್ಟ ಮಟ್ಟದಲ್ಲಿ ಕ್ರೀಡೆಗೆ ಒತ್ತು ಕೋಡಲು ವಿಶೇಷ ಕಾರ್ಯಕ್ರಮ ಅವಶ್ಯಕತೆ ಇದೆ ಎಂದು ತಿಳಿಸಿದರು. ಈ ಕ್ರೀಡಾಂಗಣದ ಅಭಿವೃದ್ಧಿಗಾಗಿ ಕ್ರೀಡಾ ಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಖಾತೆಯನ್ನು ಸಿಎಂ ಸಿದ್ದರಾಮಯ್ಯರವರೇ ವಹಿಸಿಕೊಂಡಿರುವುದ್ದರಿಂದ ಅನುದಾನ ಬಿಡುಗಡೆ ಮಾಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ನಮ್ಮ ವಿಧಾನಸಭಾ ಕ್ಷೇತ್ರಕ್ಕೆ ಮೂರು ತಾಲೂಕು ಒಳಪಡುವುದರಿಂದ ಅದರಲ್ಲೂ ಯಳಂದೂರು ತಾಲೂಕಿನಲ್ಲಿ ಕ್ರೀಡಾಂಗಣ ಇಲ್ಲದಿರುವುದರಿಂದ ನನ್ನ ಅಧಿಕಾರ ಅವಧಿಯಲ್ಲಿ ಕ್ರೀಡಾಂಗಣ ಮಾಡಿಕೊಡುವುದಾಗಿ ಭರವಸೆ ನೀಡಿದರು.ಕ್ರೀಡಾಕೂಟದಲ್ಲಿ ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ದೈಹಿಕ ಪರಿವೀಕ್ಷಕರು ಸ್ಟೀವನ್, ಸೂರಾಪುರ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಎನ್.ಲೋಕೇಶ್, ಜಾಗೇರಿ ಇನ್ನಿತರರಿದ್ದರು.